ಮಂಗಳೂರು: ಪೊಲೀಸ್ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕಾಗಿ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಪುತ್ರರೊಬ್ಬರು ಮಾಡಿದ ಪ್ರಯತ್ನವೊಂದು, ಇದೀಗ ಅವರ ಶಿಕ್ಷಣಕ್ಕಾಗಿ ದೊಡ್ಡ ನಿಧಿಯೊಂದನ್ನು ಆರಂಭಿಸಲು ಕಾರಣವಾಗಿದೆ. ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿ ಪುತ್ರ ತನ್ನ ಗೆಳೆಯನ ಜೊತೆಗೆ ಸೇರಿ ಒಂದು ಕೋಟಿ ರೂ.ಗಳ ನಿಧಿಯನ್ನು ವಿದ್ಯಾಭ್ಯಾಸಕ್ಕಾಗಿ ಬರುವ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗಾಗಿ ಆರಂಭಿಸಿದ್ದಾರೆ.
ಮಂಗಳೂರಿನ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಎಂ.ವಿ. ನಾಯರ್ ಅವರು ಬ್ಯಾಂಕ್ವೊಂದರ ಚೇರ್ಮೆನ್ ಆಗಿ ನಿವೃತ್ತಿಯಾಗಿದ್ದಾರೆ. ಇವರು ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಎಂ.ಕೆ.ಆರ್ ನಾಯರ್ ಎಂಬುವರ ಪುತ್ರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಎಂ.ಕೆ.ಆರ್ ನಾಯರ್ ಅವರು ಪುತ್ರನನ್ನು ಪದವಿ ವಿದ್ಯಾಭ್ಯಾಸಕ್ಕಾಗಿ ಅಲೋಶಿಯಸ್ ಕಾಲೇಜಿಗೆ ಸೇರಿಸಿದ್ದರು.
ಆರ್ಥಿಕವಾಗಿ ತುಂಬಾ ಕಷ್ಟವಿದ್ದರೂ ಇವರನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ತನ್ನ ತಾಯಿ ಕೂಡಿಟ್ಟ ಹಣದ ಡಬ್ಬಿಯನ್ನು ಒಡೆದು ಅವರ ವಿದ್ಯಾಭ್ಯಾಸಕ್ಕಾಗಿ ನೀಡಿದ್ದನ್ನು ಎಂ.ವಿ. ನಾಯರ್ ನೆನಪಿಸಿಕೊಳ್ಳುತ್ತಾರೆ. ಇಂತಹ ಸಂಕಷ್ಟದ ಸ್ಥಿತಿ ಬೇರೆಯವರಿಗೆ ಬರಬಾರದೆಂದು ಪೊಲೀಸ್ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ನಿಧಿಯನ್ನು ಸ್ಥಾಪಿಸಿದ್ದಾರೆ.
ಅವರು ಬ್ಯಾಂಕ್ವೊಂದರ ಚೇರ್ ಮೆನ್ ಆಗಿ ದುಡಿದು ಗಳಿಸಿದ 25 ಲಕ್ಷ ರೂ. ಹಣವನ್ನು ಈ ಕಾರ್ಯಕ್ಕಾಗಿ ಮೀಸಲಿಟ್ಟಿದ್ದು, ಅದೇ ರೀತಿಯಲ್ಲಿ ಅವರ ಉದ್ದೇಶದ ಬಗ್ಗೆ ಈ ಹಿಂದೆ ಸಹೋದ್ಯೋಗಿಯಾಗಿದ್ದ ಗೆಳೆಯನಲ್ಲಿ ಹೇಳುತ್ತಾರೆ. ಅವರ ಗೆಳೆಯ ಇ.ಎಸ್. ವೆಂಕಟ್ ಸದ್ಯ ಹಾಂಕಾಂಗ್ನಲ್ಲಿದ್ದು, ಇವರ ಪ್ರಸ್ತಾವನೆಗೆ ರೂ.75 ಲಕ್ಷ ವನ್ನು ನೀಡುತ್ತಾರೆ.
ಇದನ್ನೂ ಓದಿ: ಐಎನ್ಎಸ್ ಖಂಡೇರಿ ಸಬ್ ಮೆರಿನ್ ಮೂಲಕ ರಕ್ಷಣಾ ಸಚಿವರ ಸಮುದ್ರಯಾನ
ಹೀಗೆ ಒಟ್ಟಾದ ಒಂದು ಕೋಟಿ ರೂ. ಹಣವನ್ನು ಅವರು ಕಲಿತ ಅಲೋಶಿಯಸ್ ಕಾಲೇಜಿನಲ್ಲಿ ಎಂ.ವಿ ನಾಯರ್ & ವೆಂಕಟ್ ಎಂಡೋಮೆಂಟ್ ಎಂಬ ಫಂಡ್ ಸ್ಥಾಪಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಿದ್ದಾರೆ. ಒಂದು ಕೋಟಿ ರೂ.ನಿಧಿಗೆ ಬ್ಯಾಂಕಿನಲ್ಲಿ ಅಂದಾಜು 4 ಲಕ್ಷ ರೂ.ಬಡ್ಡಿ ಸಿಗಲಿದ್ದು, ಈ ಬಡ್ಡಿ ಹಣದಿಂದಲೂ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ.
ಪೊಲೀಸ್ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಹಣವನ್ನು ಬಳಸಲು ಸೂಚಿಸಲಾಗಿದೆ. ತಲಾ 50 ಸಾವಿರದಂತೆ ವರ್ಷಕ್ಕೆ 8 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಈ ಮೂಲಕ ಪೊಲೀಸ್ ಸಿಬ್ಬಂದಿಗಳ ಮಕ್ಕಳು ಹಣದ ಕೊರತೆದಿಂದ ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬುದು ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಪುತ್ರನ ಆಶಯವಾಗಿದೆ.