ಮಂಗಳೂರು: ಉಳ್ಳಾಲದಲ್ಲಿ ಮಹಿಳೆಯ ಮೇಲೆ ಲೈಂಗಿಕ ಕಿರುಕುಳವೆಸಗಿ, ಆಕೆಯ ಮಕ್ಕಳೊಂದಿಗೆ ದುರ್ವರ್ತನೆ ತೋರಿದ ಆರೋಪಿ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಜೊತೆ ಲೈಂಗಿಕ ಕಿರುಕುಳ ಮತ್ತು ಆಕೆಯ ಮಕ್ಕಳ ಜೊತೆ ದುರ್ವರ್ತನೆ ತೋರಿದ್ದಾನೆ ಎಂದು ಜನವರಿ 16ರಂದು ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದು ಆತನ ಹುಡುಕಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಕರ್ನಾಟಕದಲ್ಲಿ ಮತ್ತೊಂದು ತಂಡ ಹೊರ ರಾಜ್ಯದಲ್ಲಿ ಆತನಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಈ ಆರೋಪಿ ಡಿಸೆಂಬರ್ 25ರವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಷ್ಟು ಮಾತ್ರವಲ್ಲದೆ ಆಕೆಯ ಹೆಣ್ಣುಮಕ್ಕಳ ಜೊತೆಗೆ ದುರ್ವರ್ತನೆ ತೋರುತ್ತಿದ್ದ. ಈ ಬಗ್ಗೆ ಆಕೆ ತನ್ನ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ದೂರು ಕೊಡಲು ನಿರ್ಧರಿಸಿದ್ದಾರೆ. ಆದರೆ ಪೊಲೀಸ್ಗೆ ದೂರು ನೀಡದಂತೆ ಆತ ಮಹಿಳೆಗೆ ಬೆದರಿಸಿದ್ದಾನೆ. ಆಕೆ ದೂರು ನೀಡಿದ ಬಳಿಕ ಆತನ ಬೆಂಬಲಿಗರು ಬಂದು ಆಕೆಯನ್ನು ಬೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನ ಬೆಂಬಲಿಗರು ಬೆದರಿಸುವ ಬಗ್ಗೆಯೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.