ಮಂಗಳೂರು : ಕೊರಗಜ್ಜನ ಕಟ್ಟೆ ಧಾರ್ಮಿಕ ಕ್ಷೇತ್ರಕ್ಕೆ ಇಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರಗಜ್ಜನ ಕಟ್ಟೆ ಧಾರ್ಮಿಕ ಕ್ಷೇತ್ರಕ್ಕೆ ತುಳು ನಾಡಿನಲ್ಲಿ ಜಾತಿ, ಧರ್ಮ ಮರೆತು ಜನರು ಆಗಮಿಸುತ್ತಾರೆ. ನಾನು ಇಲಾಖೆಗೆ ಸೇರಿದ ಪ್ರಥಮ ಪ್ರಕರಣವು ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಎಸಗಿದ್ದಾಗಿತ್ತು. ಅದರಲ್ಲಿ ಆರೋಪಿಗಳ ಬಂಧನವಾಗಿತ್ತು. ಈ ಕರ್ತವ್ಯ ಅವಧಿಯ ಒಂದು ವರ್ಷದ ಕೊನೆಯಲ್ಲಿಯೂ ಅಂತಹದ್ದೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದೇವೆ ಎಂದರು.
ಕಠಿಣ ಪ್ರಕರಣಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳು ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕಟ್ಟೆಯಲ್ಲಿ ಹರಕೆ ಹೊತ್ತಿ ಯಶಸ್ವಿಯಾಗಿದ್ದರು. ಇದೀಗ ದೇಸಾಯಿ ಪ್ರಕರಣದಲ್ಲಿಯೂ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ. ಅದರಂತೆ ಆರೋಪಿಯ ಬಂಧನವೂ ಆಗಿದೆ. ಈ ಕಾರಣಕ್ಕಾಗಿ ಇಂದು ಕುತ್ತಾರು ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿದ್ದೇನೆ ಎಂದರು.
ಬ್ಯಾನರ್ ಹಾಕಿ ಆರೋಪಿ ದೇಸಾಯಿಗೆ ಶ್ರದ್ಧಾಂಜಲಿ :
ಕೊರಗಜ್ಜನ ಕಟ್ಟೆ ಸೇರಿದಂತೆ 18 ಧಾರ್ಮಿಕ ಕೇಂದ್ರಗಳ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿ ವಿಕೃತಿ ಮೆರೆದು ಜೈಲು ಪಾಲಾಗಿರುವ ಆರೋಪಿ ದೇವದಾಸ್ ದೇಸಾಯಿ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಸಮರ್ಪಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಭಾರತದ ಮಣ್ಣಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಡ. ಮತಾಂತರಿ ಮಿಷಿನರಿಗಳೆ ನಿಮ್ಮ ಮತ ಪ್ರಚಾರಕ್ಕಾಗಿ ಸನಾತನ ಧರ್ಮದ ದೈವ ದೇವರುಗಳನ್ನು ನಿಂದಿಸಬೇಡಿ, ನಿಮ್ಮ ಅಧರ್ಮಿಯರ ನಾಶ ಈ ಮಣ್ಣಿನಲ್ಲಿ ಖಂಡಿತ. ಈ ಕೃಷ್ಣನ ನಾಡಿನಲ್ಲಿ ಕ್ರಿಸ್ತನ ಬೇಳೆ ಬೇಯದು ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.
ಉಳ್ಳಾಲದಲ್ಲೂ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಬಜರಂಗದಳ :
ಕೊರಗಜ್ಜನ ಕ್ಷೇತ್ರ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಶ್ರದ್ಧಾಂಜಲಿ ಕೋರಿ ಉಳ್ಳಾಲದ ಬಾಕಿ ಬೀರಿ, ಮಾಡೂರು, ಕೊಂಡಾಣ ಭಾಗಗಳಲ್ಲಿ ಬಜರಂಗದಳದ ಕಾರ್ಯಕರ್ತರು ಹಲವೆಡೆ ಫ್ಲೆಕ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಸಂಭ್ರಮದಲ್ಲಿ ಕೋವಿಡ್ ನಿಯಮ ಗಾಳಿಗೆ.. ಬೆಂಗಳೂರಿನ ಕೆಲ ಪಬ್‌ಗಳಲ್ಲಿ ಜನಸಂದಣಿ..