ಮಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾದು ನಂತರ ಅವರನ್ನು ಭೇಟಿಯಾದರು.
ಉಳ್ಳಾಲದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಡಾ. ಪಿ.ಎಸ್. ಹರ್ಷ ಹೆಚ್ಡಿಕೆ ಅವರೊಂದಿಗೆ ಮಾತುಕತೆ ನಡೆಸಿದರು. ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ಕುಮಾರಸ್ವಾಮಿಯವರು ನಗರ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಹರ್ಷ ಅವರೇ ಹೆಚ್ಡಿಕೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ತಮ್ಮ ಭೇಟಿಗೆ ಯಾವುದೇ ಬಣ್ಣ ಕಲ್ಪಿಸಬೇಡಿ ಎಂದು ಹರ್ಷ ಟ್ವಿಟ್ರ್ನಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಕೂಡ, ಮಂಗಳೂರು ಪೊಲೀಸ್ ಕಮಿಷನರ್ ಜೊತೆಗೆ ಮಾತುಕತೆ ನಡೆಸಿದ್ದು ನಿಜ. ಇಲ್ಲಿನ ಕೆಲವೊಂದು ಘಟನೆಗಳ ಕುರಿತು ಅವರು ನನ್ನ ಬಳಿ ಪ್ರಸ್ತಾವನೆ ಮಾಡಿದ್ದಾರೆ. ಕೆಲವು ಮಾಹಿತಿಗಳನ್ನು ಸಹ ನನ್ನ ಗಮನಕ್ಕೆ ತಂದಿದ್ದಾರೆ. ನೋಡೋಣ ಸತ್ಯಾಸತ್ಯತೆ ಏನು ಹೊರಗಡೆ ಬರುತ್ತದೆ. ಈ ಬಗ್ಗೆ ಯಾವುದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.