ಮಂಗಳೂರು : ಇಂದಿರಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿರುವ ಆರೋಪದಲ್ಲಿ 9 ವಿದ್ಯಾರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ತಂಕಮಣಿ ನಿವಾಸಿ ನಂದು ಶ್ರೀಕುಮಾರ್(19), ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಶಿಹಾಸ್(20), ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರು, ತೈಕ್ಕಾಡ್ ನಿವಾಸಿ ಪ್ರವೀಶ್ ಕೆ.ಪಿ.(21), ತ್ರಿಶ್ಶುರ್ ಜಿಲ್ಲೆಯ ಕಂಡನ್ನಶ್ವರಿ, ನಂಬಝೀಕ್ಕಾಡ್ ನಿವಾಸಿ ಗೋಪಿಕೃಷ್ಣ(21), ತ್ರಿಶ್ಶೂರ್ ಜಿಲ್ಲೆಯ ಚವಕ್ಕಾಡ್ ನಿವಾಸಿ ಹಸನ್ ಪಿ.ಎಸ್.(21), ತ್ರಿಶ್ಶೂರ್ ಜಿಲ್ಲೆಯ ಚವಕ್ಕಾಡ್ ನಿವಾಸಿ ವಿಷ್ಣು ಪಿ.ಆರ್.(22), ಇಡುಕ್ಕಿ ಜಿಲ್ಲೆಯ ತಂಕಮಣಿ ನಿವಾಸಿ ಅಲೆನ್ ಶೈಜು(19) ಹಾಗೂ ಅಭಿ ಅಲೆಕ್ಸ್, ಜೈಸಿಲ್ ಮೊಹಮ್ಮದ್ ಬಂಧಿತ ಆರೋಪಿಗಳು.
ಮಂಗಳೂರಿನ ಇಂದಿರಾ ಕಾಲೇಜಿನ ಆಲೈಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಮಲ್ ಗಿರೀಶ್ ಹಾಗೂ ಕಾರ್ತಿಕ್ ರನ್ನು ಈ 9 ಮಂದಿ ವಿದ್ಯಾರ್ಥಿಗಳು ನ.27ರಂದು ನಗರದ ಅತ್ತಾವರದ ಪ್ಲ್ಯಾಟ್ನಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ.
ಆರೋಪಿಗಳು ಅಮಲ್ ಗಿರೀಶ್ ಹಾಗೂ ಕಾರ್ತಿಕ್ರಿಗೆ ಹಾಡು ಹೇಳುವಂತೆ ಹೇಳಿ ಅವರ ಗಡ್ಡವನ್ನು ಅವರಿಂದಲೆ ಶೇವಿಂಗ್ ಮಾಡಿಸಿದ್ದಾರೆ. ಜೊತೆಗೆ ಅವರಿಗೆ ಹೆಲ್ಮೆಟ್ ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆಂದು ದೂರು ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲ್ಮಠ ಯೆನೆಪೊಯ ಕಾಲೇಜಿನ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ 7 ವಿದ್ಯಾರ್ಥಿಗಳು, ಇಂದಿರಾ ಕಾಲೇಜಿನ ಓರ್ವ ವಿದ್ಯಾರ್ಥಿ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಇವರಲ್ಲಿ ಏಳು ಮಂದಿ ಗಾಂಜಾ ಸೇವನೆ ಮಾಡಿರೋದು ದೃಢಗೊಂಡಿದೆ. ಆರೋಪಿಗಳು ಗಾಂಜಾ ಸೇವನೆ ಮಾಡಿರೋದಾಗಿ ಒಪ್ಪಿದ್ದಾರೆ. ಇವರಲ್ಲಿ ಅಲೈನ್ ಶೈಜು ಎಂಬುವವನಿಗೆ ಕೊರೊನಾ ಪಾಸಿಟಿವ್ ಆಗಿದ್ದಾನೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.