ಮಂಗಳೂರು : ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ನಾಮಪತ್ರ ಸಲ್ಲಿಸಿದರು.
ದಕ್ಷಿಣ ಕನ್ನಡ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಕಚೇರಿಗೆ ತೆರಳಿ ಬೆಳಗ್ಗೆ 10.45 ಕ್ಕೆ ನಳಿನ್‌ಕುಮಾರ್ ಕಟೀಲ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಪುರುಷೋತ್ತಮ ಭಟ್, ಸಂಜೀವ ಮಠಂದೂರು, ಮೋನಪ್ಪ ಭಂಡಾರಿ, ಸುನೀಲ್ ಕುಮಾರ್ ಜೊತೆಗಿದ್ದರು.
ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಮೂರನೇ ಬಾರಿಗೆ ಲೋಕಸಭಾ ಸ್ಪರ್ಧೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಮೂರನೇ ಬಾರಿಯೂ ಜಯಗಳಿಸುವ ವಿಶ್ವಾಸವಿದೆ. ನರೇಂದ್ರ ಮೋದಿ ಅವರು ನೀಡಿದ ಆಡಳಿತ, ಜಿಲ್ಲೆಗೆ ನೀಡಿದ ಕೊಡುಗೆಗೆ ಜನ ಮತ್ತೆ ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.