ಮಂಗಳೂರು: ಮಂಗಳೂರು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸಾಕಷ್ಟು ಸಮಸ್ಯೆಗಳು ತಲೆದೋರಿದ್ದು, ಮಂಗಳೂರು ಶಾಸಕರಿಬ್ಬರು ಸರ್ಕಾರಕ್ಕೆ ಒತ್ತಡ ಹಾಕಿ ಮೇಯರ್, ಉಪ ಮೇಯರ್ ಹಾಗೂ ಮನಪಾ ಸದಸ್ಯರ ಪ್ರಮಾಣ ವಚನ ಪ್ರಕ್ರಿಯೆಯನ್ನು ಕೂಡಲೇ ನಡೆಸಬೇಕೆಂದು ಮಂಗಳೂರು ಮನಪಾ ಸದಸ್ಯ ಶಶಿಧರ್ ಹೆಗ್ಡೆ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮನಪಾದಲ್ಲಿ ಆಡಳಿತ ಇಲ್ಲದೆ ಒಂದು ವರ್ಷವಾಯಿತು. ಮನಪಾದ ಚುನಾವಣೆ ನಡೆದು ಎರಡು ತಿಂಗಳು ಕಳೆಯಿತು. ಮನಪಾ ಸದಸ್ಯರ ಪ್ರಮಾಣ ವಚನ ಸ್ವೀಕಾರ ಇನ್ನೂ ನಡೆದಿಲ್ಲ. ಮನಪಾದ ಎಲ್ಲಾ ಇಲಾಖೆಗಳಲ್ಲೂ ಸಮಸ್ಯೆಗಳು ತಲೆದೋರಿವೆ. ಹಾಗಾಗಿ 21ನೇ ಅವಧಿಯ ಮೇಯರ್ ಆಯ್ಕೆಯ ಪ್ರಕ್ರಿಯೆಯನ್ನು ಮೀಸಲಾತಿಯ ಪ್ರಕಾರ ಕೂಡಲೇ ಸಂಬಂಧಪಟ್ಟ ಶಾಸಕರು ನಿರ್ವಹಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮಂಗಳೂರು ಮನಪಾದಲ್ಲಿ ಆಡಳಿದಲ್ಲಿರುವಾಗ ನಗರಸಭೆ, ಪುರಸಭೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಆ ಸಂದರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಒಂದುವರೆ ವರ್ಷಗಳಾದರೂ ಇನ್ನೂ ನಗರಸಭೆ, ಪುರಸಭೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಲ್ಲಿ 15ದಿನಗಳೊಳಗೆ ಅಧ್ಯಕ್ಷ , ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು. ಈಗ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಇಷ್ಟು ಸಮಯ ಆದರೂ ಯಾಕೆ ಈ ಆಯ್ಕೆ ನಡೆದಿಲ್ಲ ಎಂದು ಶಶಿಧರ ಹೆಗ್ಡೆ ಲೇವಡಿ ಮಾಡಿದರು.