ಮಂಗಳೂರು: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಳೆದ ವರ್ಷ ಡಿ.19 ರಂದು ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಹಾಗೂ ಗೋಲಿಬಾರ್ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪೂರ್ಣಗೊಂಡಿದೆ. ಸರ್ಕಾರಕ್ಕೆ 2,500 ಪುಟಗಳ ವರದಿ ಸಲ್ಲಿಕೆಯಾಗಿದೆ.
ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ 2019 ಡಿ.19 ರಂದು ಹಿಂಸಾತ್ಮಕ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಇಬ್ಬರು ಗೋಲಿಬಾರ್ಗೆ ಬಲಿಯಾಗಿದ್ದರು. ಘಟನೆಯ ಬಗ್ಗೆ ಪರ ವಿರೋಧ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿತ್ತು. ಉಡುಪಿಯ ಜಿಲ್ಲಾಧಿಕಾರಿ ಜಗದೀಶ್ ಜಿ. ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆರಂಭದಲ್ಲಿ ತನಿಖೆ ವೇಗಗತಿಯನ್ನು ಪಡೆದಿದ್ದರೂ, ಆ ಬಳಿಕ ಕೊರೊನಾ ತನಿಖೆಗೆ ಅಡ್ಡಿಯಾಯಿತು. ಹಾಗಾಗಿ ತನಿಖೆಯನ್ನು ಮತ್ತೆ ಮೂರು ತಿಂಗಳ ಅವಧಿಯನ್ನು ವಿಸ್ತರಣೆ ಮಾಡಲಾಯಿತು.
ಈ ಅವಧಿಯಲ್ಲಿ ಇಟ್ಟು 14 ಬಾರಿ ವಿಚಾರಣೆ ನಡೆದಿದ್ದು, ಅಂದಿನ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, ಉಪ ಪೊಲೀಸ್ ಆಯುಕ್ತ ಅರುಣಾಂಗ್ಶು ಗಿರಿ ಸೇರಿದಂತೆ ಅನೇಕ ಪೊಲೀಸರು ಹಾಗೂ ಗೋಲಿಬಾರ್ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಸೇರಿ ಸುಮಾರು 114 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ.
ದಾಖಲೆಗಾಗಿ ಅಂದಿನ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಸಾಕ್ಷ್ಯಾಧಾರ ಸಹಿತ ಲಿಖಿತ ಹೇಳಿಕೆಗಳನ್ನು ತನಿಖಾ ತಂಡ ಸಾಕ್ಷಿಯಾಗಿ ಪಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿಸ್ಟ್ರೇಟ್ ತನಿಖೆ ಸಂಪೂರ್ಣಗೊಂಡಿದ್ದು, 2500 ಪುಟಗಳ ವರದಿಯಲ್ಲಿ ಘಟನೆಗೆ ಕಾರಣ, ಗೋಲಿಬಾರ್ಗೆ ಕಾರಣವಾದ ಸನ್ನಿವೇಶಗಳ ಕುರಿತು ಸವಿವರವಾಗಿ ಉಲ್ಲೇಖಿಸಲಾಗಿದೆ.
ಇನ್ನು ವರದಿಯನ್ನು ಅಂತಿಮಗೊಳಿಸಿ ತನಿಖಾಧಿಕಾರಿ ಜಗದೀಶ್. ಜಿ ಅವರು ರಾಜ್ಯ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ. ವರದಿಯ ಅಂಶಗಳನ್ನು ಗೌಪ್ಯವಾಗಿ ಇರಿಸಲಾಗಿದೆ.