ಮಂಗಳೂರು: ಕಳೆದ 10 ದಿನಗಳಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಆಚರಿಸಲ್ಪಡುತ್ತಿದ್ದ ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ನಿನ್ನೆ ಅದ್ಧೂರಿ ತೆರೆ ಎಳೆಯಲಾಯಿತು.
ಅ. 17ರಂದು ಮಹಾಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, 10 ದಿನಗಳ ಕಾಲ ನವರಾತ್ರಿ ಹಾಗೂ ದಸರಾ ಮಹೋತ್ಸವ ನೆರವೇರಿತು. ಕೊರೊನಾ ಸೋಂಕಿನ ಭೀತಿಯ ನಡುವೆಯೂ ಪ್ರತಿ ದಿನ ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ವೈಭವದಿಂದ ದಸರಾ ಮಹೋತ್ಸವ ನಡೆಯಿತು.
ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಹುಲಿ ವೇಷಗಳ ತಂಡಗಳಿಗೆ ಪ್ರದರ್ಶನಕ್ಕೆ ದೇವಾಲಯಗಳಲ್ಲಿ ಮಾತ್ರ ಅವಕಾಶ ನೀಡಲಾಗಿದ್ದು, ವಿವಿಧ ತಂಡಗಳು ದೇವಾಲಯದ ಮುಂದೆ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸಿದರು. ಈ ಪ್ರದರ್ಶನಕ್ಕೆ ಸಾವಿರಾರು ಮಂದಿ ಪ್ರೇಕ್ಷಕರು ಸಾಕ್ಷಿಯಾದರು. ಅಲ್ಲದೆ ಶೋಭಾಯಾತ್ರೆಗೆ ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದ ಸಾಂಕೇತಿಕವಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಪ್ರದರ್ಶನ ಮಾಡಲಾಯಿತು.
ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆರಾಧಿಸಲ್ಪಟ್ಟ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಸರ್ಜನಾ ಪೂಜೆ ನೆರವೇರಿಸಿ, ಕ್ಷೇತ್ರದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡಲಾಯಿತು.