ಮಂಗಳೂರು: ಸಾರ್ವಜನಿಕರ ಹಿತದೃಷ್ಟಿಯಿಂದ, ಅವರ ಸುರಕ್ಷತೆಗಾಗಿ ಮಾಡುವ ಪೊಲೀಸ್ ಕಾರ್ಯಾಚರಣೆ ಮುಂದುವರಿಯುತ್ತದೆ. ನಮ್ಮ ಉದ್ದೇಶ ಸ್ಪಷ್ಟವಿದ್ದು, ಸಾವಿರ ಜನರಲ್ಲಿ ಓರ್ವರು ಟೀಕಿಸುತ್ತಾರೆಂದು ಸದುದ್ದೇಶದಿಂದ ಮಾಡುವ ನಮ್ಮ ಕಾರ್ಯಾಚರಣೆಯನ್ನು ನಾವು ನಿಲ್ಲಿಸಲು ಸಾಧ್ಯವಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ರಾತ್ರಿ ಹೊತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ಮೇಲೆ ನಡೆಸಿರುವ ಕಾರ್ಯಾಚರಣೆಗೆ ಬಂದಿರುವ ಟೀಕೆಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಅವರು, ಈ ಕಾರ್ಯಾಚರಣೆಗೆ ಬೇಕಾದ ಸೃಜನಾತ್ಮಕ ಸಲಹೆಗಳಿದ್ದಲ್ಲಿ ಖಂಡಿತ ಪಡೆಯುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಬೀಚ್ ಇರುವ ಪೊಲೀಸ್ ಠಾಣೆಯಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ ಎಂಬುದನ್ನು ನೋಡಿಕೊಂಡು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಲಾಗುತ್ತದೆ. ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡುವುದು, ಜೊತೆಗೆ ಬೇರೆ ಇಲಾಖೆಯೊಂದಿಗೆ ಮಾತನಾಡಿ, ಸಿಸಿ ಕ್ಯಾಮರಾಗಳನ್ನು ಹೆಚ್ಚು ಅಳವಡಿಸುವಂತೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಯನ್ನು ರಾತ್ರಿ ಹೊತ್ತಿಗೂ ನಿಯೋಜನೆ ಮಾಡುವಂತೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಬಗ್ಗೆ ಶೀಘ್ರದಲ್ಲಿ ಎಲ್ಲಾ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿಸಿ ಸಭೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ. ಟ್ರಾಫಿಕ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಟೋಯಿಂಗ್ ಮಾಡುವ ಬಗ್ಗೆ ಎಚ್ಚರ ವಹಿಸುವ ಪ್ರಯತ್ನ ಮಾಡಲಾಗುತ್ತದೆ. ಕೋಟ್ಪಾ ಉತ್ತಮವಾದ ಕಾನೂನಾಗಿದ್ದು, ಅದನ್ನು ಜಾರಿಗೆ ತರಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಮಾದಕ ದ್ರವ್ಯಗಳ ಬಗ್ಗೆ ಸಾಕಷ್ಟು ಕಾರ್ಯಾಚರಣೆ ನಡೆಸಿ, ಅದನ್ನು ಬೇರು ಸಹಿತ ಕಿತ್ತು ಹಾಕುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.