ಮಂಗಳೂರು: ಸದಾ ಜನಜಂಗುಳಿಯಿಂದ ಕೂಡಿದ್ದ ಮಂಗಳೂರು ನಗರ ಕೊರೊನಾ ಭಯಕ್ಕೆ ಏಕಾಏಕಿ ಸ್ತಬ್ಧವಾಗಿತ್ತು. ಇದೀಗ ನಗರ ಸಹಜಸ್ಥಿತಿಗೆ ಮರಳುತ್ತಿದೆ. ಸಾರ್ವಜನಿಕ ಸಾರಿಗೆ, ಖಾಸಗಿ ಬಸ್ಗಳು, ಆಟೋಗಳು ಮೊದಲಿನಂತೆ ಸಂಚರಿಸುತ್ತಿವೆ.
ಕೆಲಸಕ್ಕೆ ಬರುವ ಮತ್ತು ಹೋಗುವ ಕಾರ್ಮಿಕರು ಬೆಳಗ್ಗೆ ಮತ್ತು ಸಂಜೆ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೊರೊನಾ ಸಂದರ್ಭಕ್ಕೆ ಹೋಲಿಸಿದರೆ ಸದ್ಯದ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುತ್ತಾರೆ ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ.
ಮಹಾಮಾರಿಯಿಂದಾಗಿ ಊರುಗಳತ್ತ ಹೋಗಿದ್ದ ವಲಸೆ ಕಾರ್ಮಿಕರು ಈಗ ನಗರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಾರ್ಮಿಕರು ಮನೆಗಳತ್ತ ಹೋಗಿದ್ದ ಕಾರಣ, ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಹೀಗಾಗಿ, ಅನ್ಲಾಕ್ ನಂತರ ಕೆಲವು ಬಿಲ್ಡರ್ಸ್ಗಳೇ ಬಸ್ ವ್ಯವಸ್ಥೆ ಕಲ್ಪಿಸಿ ಕಾರ್ಮಿಕರನ್ನು ಕರೆಯಿಸಿಕೊಂಡರು.
ಮಾಲ್, ದೇವಸ್ಥಾನಗಳಲ್ಲಿ ಜನರ ಓಡಾಟ ಇನ್ನೂ ಹೆಚ್ಚಿಲ್ಲ. ಇನ್ನೂ ಕೆಲವೆಡೆ ಕೊರೊನಾ ಭೀತಿಯಿಂದಾಗಿ ಅಗತ್ಯ ಕೆಲಸಗಳಿಗಾಗಿ ಮನೆಯಿಂದ ಜನರು ಹೊರ ಬರುತ್ತಿದ್ದಾರೆ. ಸಹಜ ಸ್ಥಿತಿಗೆ ಮರಳುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಅದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದು.