ಮಂಗಳೂರು : ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ಗಲಾಟೆ ನಡೆದು ಸಹೋದರನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ತಡರಾತ್ರಿ ನಡೆದಿದೆ.
ಬೆಂಗ್ರೆ ನಿವಾಸಿ ಮುಸ್ತಾಫ ಕೊಲೆಯಾದ ವ್ಯಕ್ತಿ. ಮುಸ್ತಫಾನ ಸಹೋದರ ರೈಜು ಕೊಲೆ ಆರೋಪಿ. ಆಸ್ತಿ ಮತ್ತು ಮನೆ ವಿಚಾರಕ್ಕೆ ಇವರ ಮನೆಯಲ್ಲಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಗುರುವಾರ ತಡರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಮನೆಯ ವಿಚಾರಕ್ಕೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಭಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ರೈಜು ಚೂರಿಯಿಂದ ಮುಸ್ತಾಫನಿಗೆ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮುಸ್ತಾಫನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಮುಸ್ತಾಫ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.