ಕಡಬ( ದಕ್ಷಿಣ ಕನ್ನಡ): ತಾಲೂಕಿನ ಬಲ್ಯದ ಗಾಣದಕೊಟ್ಟಿಗೆ ಎಂಬಲ್ಲಿ ಮಾಂಸಾಹಾರ ಸೇವಿಸಿ ಓರ್ವ ಮೃತಪಟ್ಟಿದ್ದು, ಹಲವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ (60) ಮೃತ ವ್ಯಕ್ತಿ. ದೇವಪ್ಪ ಗೌಡರು ಸ್ವಸಹಾಯ ಸಂಘದ ಅಡಿ ಕೂಲಿ ಕೆಲಸ ಮಾಡಲು ಸಂಘದ ಗುಂಪಿನ ಇತರ ಸದಸ್ಯರೊಂದಿಗೆ ಬಲ್ಯದ ಸಂಜೀವ ದೇವಾಡಿಗ ಎಂಬುವರ ಮನೆಗೆ ಹೋಗಿದ್ದರು. ಅಲ್ಲಿ ಮಧ್ಯಾಹ್ನ ಊಟಕ್ಕೆ ಮಾಡಲಾಗಿದ್ದ ಕೋಳಿ ಪದಾರ್ಥ ಸೇವಿಸಿದ್ದಾರೆ.
ಕೆಲಸಕ್ಕೆ ಬಂದಿದ್ದ ಆನಂದಗೌಡ ಮತ್ತು ಮನೆ ಮಾಲೀಕ ಸಂಜೀವ ದೇವಾಡಿಗ ಸೇರಿದಂತೆ ಅವರ ಕುಟುಂಬದವರು ಸಹ ಈ ಆಹಾರ ತಿಂದಿದ್ದಾರೆ. ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದ ಬಳಿಕ ದೇವಪ್ಪ ಗೌಡರಿಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಯಿತು.
ಇನ್ನು ಸಂಜೀವ ದೇವಾಡಿಗರ ಮನೆಯಲ್ಲಿ ಊಟ ಮಾಡಿದ ಆನಂದ ಗೌಡ, ಸಂಜೀವ ದೇವಾಡಿಗರ ಪತ್ನಿ ಗೀತಾ ಮತ್ತು ಮಕ್ಕಳಾದ ಶ್ರೇಯಾ, ಶ್ರಾವಣರವರಿಗೂ ಸಹ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಸಹ ನೆಲ್ಯಾಡಿ ಆಸ್ಪತ್ರೆಗೆ ದಾಖಲಾಗಿತ್ತು.
ಆದರೆ, ದೇವಪ್ಪ ಗೌಡರ ಆರೋಗ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸುಧಾರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.