ನೆಲ್ಯಾಡಿ(ದಕ್ಷಿಣ ಕನ್ನಡ): ಮೊಬೈಲ್ ಫೋನ್‌ನಲ್ಲಿ ಆತ್ಮಹತ್ಯೆ ಬಗ್ಗೆ ಸ್ಟೇಟಸ್ ಹಾಕಿ ಯುವಕನೋರ್ವ ಮನೆ ಸಮೀಪ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೆನೀಶ್ ಒಬ್ಬರೇ ಮನೆಯಲ್ಲಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಮಾರ್ಚ್ 30ರಂದು ರಾತ್ರಿ ಪಕ್ಕದ ಮನೆಯ ಉಣ್ಣಿಕೃಷ್ಣನ್ ನಾಯರ್ ಎಂಬುವರ ಮನೆಯಲ್ಲಿ ಊಟ ಮಾಡಿ, ಕ್ಯಾರಮ್ ಆಟ ಆಡಿ ಮನೆಗೆ ಹೋಗಿದ್ದ. ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.
ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದ್ರೆ ಅವರು ರೆನೀಶ್ ಮನೆ ತಲುಪುವುದರಲ್ಲಿ ಆತಹತ್ಯೆ ಮಾಡಿಕೊಂಡಿದ್ದ. ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಅದಗಾಲೇ ಮೃತಪಟ್ಟಿದ್ದರು.
ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ : ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಲಾಡ್ಜ್ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಮೈಸೂರು ಮೂಲದ ದೇವೇಂದ್ರ (48), ಪತ್ನಿ ನಿರ್ಮಲಾ ಹಾಗೂ 9 ವರ್ಷದ ಅವಳಿ ಮಕ್ಕಳಾದ ಚೈತನ್ಯ, ಚೈತ್ರಾ ಎಂದು ಗುರುತಿಸಲಾಗಿದೆ.
ಮೈಸೂರಿನ ವಿಜಯನಗರ ಮೂಲದ ದೇವೇಂದ್ರ ಅವರು ಪತ್ನಿ ಹಾಗೂ ಪುತ್ರಿಯರನ್ನು ಮೊದಲು ಹತ್ಯೆ ಮಾಡಿದ್ದಾರೆ. ಆ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತದೇಹಗಳ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ನಾಲ್ವರಲ್ಲಿ ಓರ್ವ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಉಳಿದ ಮೂವರು ಮೃತದೇಹಗಳು ಮಲಗಿದ ಸ್ಥಿತಿಯಲ್ಲಿ ಕಂಡುಬಂದಿವೆ.
ಮೂರು ದಿನಗಳಿಂದ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಒಂದು ದಿನಕ್ಕೆ ಲಾಡ್ಜ್ ಬುಕ್ ಮಾಡಿದ್ದರು. ಆ ಬಳಿಕ ಎರಡು ದಿನಗಳಿಗೆ ಮತ್ತೆ ವಿಸ್ತರಿಸಿದ್ದರು. ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಿತ್ತು. ಇಂದು ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡು ತಪಾಸಣೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮತ್ತು ಬಂದರು ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾತನಾಡಿ, 'ಮೈಸೂರಿನ ವಿಜಯ ನಗರ ಮೂಲದ ದೇವೇಂದ್ರ ಮತ್ತು ಅವರ ಕುಟುಂಬ ಈ ಲಾಡ್ಜ್‌ನಲ್ಲಿ ತಂಗಿದ್ದರು. ಒಂದು ದಿನಕ್ಕಾಗಿ ಬಾಡಿಗೆ ಪಡೆದು ಎರಡು ದಿನಗಳವರೆಗೆ ವಿಸ್ತರಿಸಿದ್ದರು. ದೇವೇಂದ್ರ ಅವರ ಕುಟುಂಬ ನಿನ್ನೆ ಸಂಜೆಯೇ ಚೆಕ್ಔಟ್ ಮಾಡಬೇಕಾಗಿತ್ತು. ಆದ್ರೆ ಸಂಜೆಯಿಂದ ಅವರು ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಸಾಲದ ಸಮಸ್ಯೆ ಬಹಿರಂಗ: ಲಾಡ್ಜ್ ಸಿಬ್ಬಂದಿ ಇಂದು ಬೆಳಗ್ಗೆ 8.30ರ ಸುಮಾರಿಗೆ ಕಿಟಕಿ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದರು. ಸುದ್ದಿ ತಿಳಿದು ನಮ್ಮ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ದೇವೇಂದ್ರ ಮತ್ತು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಸಾವಿಗೀಡಾಗಿದ್ದಾರೆ. ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸಾಲದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!