ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪೊಲೀಸ್ ಠಾಣೆಯನ್ನೂ ಬಿಡದ ಕೋವಿಡ್ ಸೋಂಕು ಪೊಲೀಸರಲ್ಲಿಯೂ ಭೀತಿಯನ್ನು ಹುಟ್ಟಿಸಿದೆ. ಈ ಹಿನ್ನೆಲೆ ಸರಕಾರ ಪೊಲೀಸ್ ಠಾಣೆಗಳಿಗೆ ವೈರಾಣು ನಾಶಕ ಅಲ್ಟ್ರಾ ವೈಲಟ್ ಸ್ಕ್ಯಾನರ್ ಯಂತ್ರೋಪಕರಣ ನೀಡಲಾಗಿದೆ.
ಈ ಯಂತ್ರದೊಳಗೆ ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ಗಳು, ಕೀಗೊಂಚಲು, ಇನ್ನಿತರ ಸಾಧನಗಳನ್ನು 4 ರಿಂದ 10 ನಿಮಿಷಗಳ ಕಾಲ ಇಟ್ಟಲ್ಲಿ ಅದರಲ್ಲಿರುವ ವೈರಾಣುಗಳು ನಾಶವಾಗುತ್ತವೆ. ಅಲ್ಲದೆ ದೂರು ನೀಡಲು ಬರುವವರ ದೂರು ಪತ್ರಗಳು ಮತ್ತು ಮೊದಲಾದ ಕಾಗದಗಳನ್ನು ಯಂತ್ರದೊಳಗೆ ಹಾಕುವ ಮೂಲಕ ಕೊರೊನಾ ವೈರಾಣುಗಳಿಂದ ಮುಕ್ತಿ ಲಭಿಸಲಿದೆ.
ಮಂಗಳೂರು ನಗರದಲ್ಲಿ ಅತಿ ವೇಗವಾಗಿ ಕೊರೊನಾ ಹರಡುತ್ತಿರುವುದರಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 21 ಪೊಲೀಸ್ ಠಾಣೆಗಳಿಗೆ ಈ ಅಲ್ಟ್ರಾ ವೈಲಟ್ ಯಂತ್ರವನ್ನು ವಿತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಈಗಾಗಲೇ ಇದರ ಪ್ರಯೋಗ ಆರಂಭಿಸಲಾಗಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯ 4 ಪೊಲೀಸ್ ಠಾಣೆಗಳಿಗೆ ಮಾತ್ರ ಇದುವರೆಗೆ ಅಲ್ಟ್ರಾ ವೈಲಟ್ ಯಂತ್ರ ನೀಡಲಾಗಿತ್ತು. ಈಗ 21 ಠಾಣೆಗಳಿಗೆ ನೀಡಲಾಗಿದೆ. ಈ ಯಂತ್ರವು ವೈರಾಣುಗಳನ್ನು ಶೇ.99.99 ರಷ್ಟು ಕೊಲ್ಲುತ್ತದೆ ಎಂದು ಯಂತ್ರದ ನಿರ್ಮಾಣ ಸಂಸ್ಥೆಯು ಹೇಳಿದೆ.