ಮಂಗಳೂರು: ಮಲಪ್ರಭಾ ಕಾಲುವೆ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಮಲಪ್ರಭಾ ಕಾಲುವೆ ಬಗ್ಗೆ ಅವರಿಗೆ ಗೊತ್ತಿಲ್ಲ. ಮಲಪ್ರಭಾ ಕಾಲುವೆ ನಿರ್ಮಾಣ ಮಾಡಲು ತಾಂತ್ರಿಕವಾಗಿ ಬಹಳ ಕಷ್ಟವಿತ್ತು. ಮಲಪ್ರಭಾ ಕಾಲುವೆ ನಿರ್ಮಾಣ ಮಾಡಿರುವ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ಮೇಲೆ ಮಲಪ್ರಭಾ 420 ಎಂದು ಆರೋಪ ಮಾಡಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಮೆದುಳು ಇಲ್ಲ. ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೋಟೀಸ್ ನೀಡುತ್ತೇನೆ ಎಂದು ಹೇಳಿದರು.
ರಾಜ್ಯವನ್ನು ಯುಪಿ ಮಾಡೆಲ್ ಮಾಡಲು ಮುಖ್ಯಮಂತ್ರಿ ಹೊರಟಿದ್ದಾರೆ. ಉತ್ತರ ಪ್ರದೇಶ ಅಭಿವೃದ್ಧಿಯಲ್ಲಿ ಕೊನೆಯ ಮೂರನೇ ಸ್ಥಾನದಲ್ಲಿದೆ. ನಮಗೆ ನಾವೆ ಮಾಡೆಲ್. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದ ಇಮೇಜ್ಗೆ ಸಂಪೂರ್ಣ ಧಕ್ಕೆ ಮಾಡಲು ಹೊರಟಿದ್ದಾರೆ ಎಂದರು.
ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಶೇ 40 % ಕಮೀಷನ್ ಪಡೆಯುವ ಬಗ್ಗೆ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ನವರು 2021 ರ ಜುಲೈನಲ್ಲಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ನಾ ಖಾವುಂಗ, ನಾ ಖಾನೆ ದೂಂಗ ಎಂದು ಹೇಳುವ ಪ್ರಧಾನಿ ಈ ಬಗ್ಗೆ ಪತ್ರ ಬರೆದು ಒಂದು ವರ್ಷ ಮೂರು ತಿಂಗಳಾದರೂ ಕ್ರಮ ತೆಗೆದುಕೊಂಡಿಲ್ಲ. ವಿರೋಧ ಪಕ್ಷದ ಮೇಲೆ ಐಟಿ, ಇಡಿ, ಸಿಬಿಐ ದಾಳಿಗಳನ್ನು ಮಾಡಿಸುವ ಸರಕಾರ ಕರ್ನಾಟಕದ 40 % ಕಮೀಷನ್ ಬಗ್ಗೆ ದಾಳಿ ಮಾಡುವುದಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್ನ 'ಪೇ ಸಿಎಂ' ಅಭಿಯಾನ