ಪುತ್ತೂರು: ಪ್ರೇಮಿಗಳ ಮದುವೆಗೆ ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ನೇತೃತ್ವದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರೇಮಿಗಳ ಮದುವೆ ಮಾಡಿಸಲಾಗಿದೆ.
ಕೆಯ್ಯೂರು ನಿವಾಸಿ ಚಿದಾನಂದ ನಾಯ್ಕ ಹಾಗೂ ಕುಂಬ್ರ ಸಾರೆಪುಣಿ ನಿವಾಸಿ ಶ್ಯಾಮಲಾ ಗೃಹಸ್ಥಾಶ್ರಮ ಪ್ರವೇಶಿಸಿದ ಪ್ರೇಮಿಗಳು. ರಿಕ್ಷಾ ಚಾಲಕ ಚಿದಾನಂದ ನಾಯ್ಕ ಹಾಗೂ ದರ್ಬೆ ಮೆಡಿಕಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಶ್ಯಾಮಲ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಹುಡುಗನ ಮನೆಯವರು ಒಪ್ಪಿಗೆ ಸೂಚಿಸಿದ್ದರೂ ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಶ್ಯಾಮಲಾ ಮನೆಯವರು ಹುಡುಗಿಗೆ ಏನೆಕಲ್‌ನ ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಿಸಲು ಸಿದ್ದತೆ ನಡೆಸಿದ್ದರು. ಇದನ್ನರಿತ ಶ್ಯಾಮಲಾ ಸೆ.23ರಂದು ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಕಚೇರಿಗೆ ಬಂದು ದೂರು ನೀಡಿ ತನ್ನ ಪ್ರೇಮಿಯೊಂದಿಗೆ ಮದುವೆ ಮಾಡಿಸುವಂತೆ ವಿನಂತಿಸಿದ್ದಳು. ದೂರಿನ ಹಿನ್ನೆಲೆ ಟ್ರಸ್ಟ್‌ನ ಪದಾಧಿಕಾರಿಗಳ ಸಭೆ ನಡೆಸಿ, ಪ್ರೇಮಿಗಳನ್ನು ಟ್ರಸ್ಟ್‌ನ ಕಚೇರಿಗೆ ಕರೆಯಿಸಿ ಚರ್ಚಿಸಿದ ಬಳಿಕ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಪ್ರೇಮಿಗಳಿಬ್ಬರನ್ನು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರೆತಂದು ಟ್ರಸ್ಟ್‌ನ ನೇತೃತ್ವದಲ್ಲಿ ವಿವಾಹ ನೆರವೇರಿಸಿಕೊಟ್ಟಿದ್ದಾರೆ. ಈ ಪ್ರೇಮವಿವಾಹದಲ್ಲಿ ಹುಡುಗನ ತಾಯಿ ಹಾಗೂ ಸಹೋದರರು ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.