ಬೆಳ್ತಂಗಡಿ(ದ.ಕ): ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ ಹಾಗೂ 39ನೇ ವರ್ಧಂತ್ಯುತ್ಸವದ ಅಂಗವಾಗಿ ಮಂಗಳವಾರ ತೋರಣ ಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.
ಪೂಜ್ಯ 105 ಶ್ರೀ ನಿರ್ವಾಣ ಸಾಗರ ಕ್ಷುಲ್ಲಕ ಮಹಾರಾಜರು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಇಂದು ಪಾದಾಭಿಷೇಕ:
ಬುಧವಾರ ಬೆಳಗ್ಗೆ 8.30 ರಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯುತ್ತದೆ. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರು ಮಂಗಲ ಪ್ರವಚನ ನೀಡುವರು.
ಅಂತಾರಾಷ್ಟ್ರೀಯ ಗ್ರಂಥಾಲಯಗಳಿಗೆ ಕೊಡುಗೆ:
ಜೈನಧರ್ಮದ ಮೇರುಕೃತಿ “ಮಹಾಪುರಾಣ”. ಪೂಜ್ಯ ಆಚಾರ್ಯ ಜಿನಸೇನಾಚಾರ್ಯ-ಗುಣಭದ್ರಾಚಾರ್ಯ ವಿರಚಿತ “ಮಹಾಪುರಾಣ”ವನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಿ ಬೆಂಗಳೂರಿನಲ್ಲಿರುವ ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಮೂಲಕ ಜಿತೇಂದ್ರ ಕುಮಾರ್ ಪ್ರಕಟಿಸಿದ್ದಾರೆ. ಈ ಗ್ರಂಥವು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಯದಲ್ಲಿದ್ದರೆ ಕುತೂಹಲಿಗಳಿಗೆ ಓದಲು ಉತ್ತಮ ಆಕರ ಗ್ರಂಥವಾಗಿದೆ. ಅಲ್ಲದೆ ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನಕ್ಕೂ ಇದು ಉಪಯುಕ್ತವಾಗಿದೆ.
ಇದನ್ನೂ ಓದಿ: ಟಾಯ್ಲೆಟ್ನೊಳಗೆ ಬಂದಿಯಾದ ಚಿರತೆ ಮತ್ತು ನಾಯಿ..!
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು ಜೈನಧರ್ಮದ ಮೇರುಕೃತಿಯಾದ “ಮಹಾಪುರಾಣ” ಗ್ರಂಥವನ್ನು ನೂರು ಅಂತಾರಾಷ್ಟ್ರೀಯ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ಉಚಿತ ಕೊಡುಗೆಯಾಗಿ ನೀಡಿರುವುದಲ್ಲದೆ, ಎಲ್ಲಾ ಗ್ರಂಥಾಲಯಗಳಿಗೆ ಗ್ರಂಥ ತಲುಪಿಸುವ ವ್ಯವಸ್ಥೆಯನ್ನೂ ಹೆಗ್ಗಡೆಯವರು ಮಾಡಿದ್ದಾರೆ.