ಮಂಗಳೂರು: ಲಂಡನ್ ನಲ್ಲಿ ಉನ್ನತ ವ್ಯಾಸಂಗ ಮಾಡಿ ವಿದೇಶದಲ್ಲಿ ಉದ್ಯೋಗದ ಕನಸು ಕಂಡಿದ್ದರೂ, ಪ್ರಧಾನಿಯವರ 'ಆತ್ಮನಿರ್ಭರ ಭಾರತ'ವನ್ನು ಬೆಂಬಲಿಸಿ ಯುವಕನೊಬ್ಬ ತನ್ನ ತಾಯ್ನಾಡಿನಲ್ಲಿಯೇ ಮೀನು ವ್ಯಾಪಾರ ಆರಂಭಿಸಿದ್ದಾರೆ. ಈ ಮೂಲಕ ಸ್ವಂತ ಉದ್ಯಮವನ್ನು ಆರಂಭಿಸಿ ನಾಲ್ಕೈದು ಯುವಕರಿಗೂ ಉದ್ಯೋಗದಾತರಾಗಿದ್ದಾರೆ.
ಈ ರೀತಿಯಲ್ಲಿ ಮೀನು ವ್ಯಾಪಾರ ಆರಂಭಿಸಿದ ಯುವಕ ನಗರದ ಕುಂಜತ್ ಬೈಲ್ ನಿವಾಸಿ ವರುಣ್ ಶೇಣವ. ಇವರು ನಗರದ ಬಿಕರ್ನಕಟ್ಟೆ ಬಳಿ ಕಡಲ್ ಫಿಶ್ ಮಾರ್ಕೆಟ್ ತೆರೆದಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಈ ಮೀನು ವ್ಯಾಪಾರವನ್ನು ಆರಂಭಿಸಿದ್ದಾರೆ.
ಮಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ ವರುಣ್ ಶೇಣವ ಬಳಿಕ 2018ರಲ್ಲಿ ಲಂಡನ್ ನ ಬಿಐಎಂ ಯುನಿವರ್ಸಿಟಿಯಲ್ಲಿ ಒಂದು ವರ್ಷ ಉನ್ನತ ವ್ಯಾಸಂಗ ಮಾಡಿದ್ದರು. 2019 ಸೆಪ್ಟೆಂಬರ್ ನಲ್ಲಿ ಅಲ್ಲಿಂದ ಭಾರತಕ್ಕೆ ಮರಳಿದ ಅವರಿಗೆ ನವೆಂಬರ್ ನಲ್ಲಿ ಲಂಡನ್ ನ ಕಂಪೆನಿಯೊಂದರಿಂದ ಉದ್ಯೋಗಕ್ಕಾಗಿ ಕರೆ ಬಂದಿತ್ತು.
ಲಾಕ್ಡೌನ್ನಿಂದ ತಪ್ಪಿದ ಹಲವು ಅವಕಾಶ: ಈ ಸಂದರ್ಭ ತೆರಳಲು ಸಿದ್ಧವಾಗುತ್ತಿದ್ದಂತೆ ಸಮೀಪದ ಬಂಧುವೊಬ್ಬರ ಅನಾರೋಗ್ಯದಿಂದ ಹೋಗಲು ಅಸಾಧ್ಯವಾಯಿತು. ಈ ನಡುವೆ ಮಂಗಳೂರಿನಲ್ಲಿಯೇ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ಮಾರ್ಚ್ ಸಂದರ್ಭದಲ್ಲಿ ಬೆಂಗಳೂರಿನ ಸಂಸ್ಥೆಯಿಂದಲೂ ಉದ್ಯೋಗದ ಅವಕಾಶ ಲಭಿಸಿದ್ದು, ಸಂದರ್ಶನಕ್ಕೆ ಕರೆಯೂ ಬಂದಿತ್ತು. ಅದಷ್ಟರಲ್ಲೇ ಲಾಕ್ ಡೌನ್ ನಿಂದಾಗಿ ಆ ಅವಕಾಶವೂ ಕೈತಪ್ಪಿತು.
'ಆತ್ಮನಿರ್ಭರ ಭಾರತ' ಕರೆಗೆ ಆಕರ್ಷಣೆ: ಆದರೆ ಉತ್ತಮ ಅವಕಾಶಗಳು ಕೈತಪ್ಪಿದರೂ ಧೃತಿಗೆಡದ ವರುಣ್ ಶೇಣವ ಮೋದಿಯವರ 'ಆತ್ಮನಿರ್ಭರ ಭಾರತ' ಕರೆಯಿಂದ ಆಕರ್ಷಿತರಾದರು. ಮೊದಲು ಯಾವ ಉದ್ಯಮ ಆರಂಭಿಸೋದು ಎಂದು ತಲೆಕೆಡಿಸಿಕೊಂಡರೂ ಕೊನೆಗೆ ಮೀನು ವ್ಯಾಪಾರ ಮಾಡುವ ಮನಸ್ಸು ಮಾಡಿದ್ದಾರೆ. ಆದರೆ ಬಂಡವಾಳಕ್ಕೆ ತೊಂದರೆಯಾದಾಗ ಸಹೋದರಿ ಹಾಗೂ ಗೆಳೆಯರ ಹಣದ ನೆರವು ನೀಡಿದ್ದಾರೆ. ಈ ಮೂಲಕ ಎರಡು ವಾರಗಳ ಹಿಂದೆ ಬಿಕರ್ನಕಟ್ಟೆಯಲ್ಲಿ ಕಡಲ್ ಫಿಶ್ ಮಾರುಕಟ್ಟೆ ಆರಂಭಿಸಿದ್ದಾರೆ.
10 ಕಿ.ಮೀ. ಒಳಗೆ ಉಚಿತ ಡೋರ್ ಡೆಲಿವರಿ ವ್ಯವಸ್ಥೆ: ನಂತೂರಿನಿಂದ ಸ್ವಲ್ಪ ದೂರ ಕ್ರಮಿಸಿದರೆ ಬಿಕರ್ನಕಟ್ಟೆಯಲ್ಲಿ ಇವರ ಮೀನು ಮಾರುಕಟ್ಟೆ ಮಳಿಗೆ ಕಾರ್ಯಾರಂಭಗೊಂಡಿದೆ. ದಿನವೂ ಇವರ ಮಳಿಗೆಯಲ್ಲಿ ಹತ್ತು ಹಲವು ಬಗೆಯ ಮೀನುಗಳು ಲಭ್ಯವಿರುತ್ತದೆ. ಅಲ್ಲದೆ ಹತ್ತು ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಡೋರ್ ಡೆಲಿವರಿ ವ್ಯವಸ್ಥೆಯೂ ಇದೆ. ಅಲ್ಲದೆ ಮೀನು ಕಟ್ ಮಾಡಿ, ಶುಚಿಗೊಳಿಸಿ ಕೊಡುವ ವ್ಯವಸ್ಥೆಯೂ ಇಲ್ಲಿ ಲಭ್ಯವಿದೆ. ತಾಜಾ ಮೀನುಗಳು ಬೇಕಾದವರು ವರುಣ್ ಶೇಣವ(9036661232) ಅವರನ್ನು ಸಂಪರ್ಕಿಸಬಹುದು.
ವಿದೇಶಕ್ಕೆ ರಪ್ತುಮಾಡುವ ಗುರಿ: ಈ ಬಗ್ಗೆ ಈಟಿವಿ ಭಾರತದೊಂದಿಗೆ ವರುಣ್ ಶೇಣವ ಮಾತನಾಡಿ, ಪ್ರಧಾನಿ ಮೋದಿಯವರ 'ಆತ್ಮನಿರ್ಭರ ಭಾರತ'ದ ಕನಸನ್ನು ಸಾಕಾರಗೊಳಿಸುವುದಕ್ಕಾಗಿ ಮೀನು ವ್ಯಾಪಾರ ಆರಂಭಿಸಿದೆ. ಈಗ ನಮ್ಮ ಮಳಿಗೆಯಿರುವಲ್ಲಿಂದ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಕರೆ ಮಾಡಿದವರಿಗೆ, ವ್ಯಾಟ್ಸ್ಆ್ಯಪ್ ಮೆಸೇಜ್ ಮಾಡಿದವರಿಗೆ ಉಚಿತವಾಗಿ ಡೋರ್ ಡೆಲಿವರಿ ವ್ಯವಸ್ಥೆ ಮಾಡಲಾಗುತ್ತದೆ. ಮೀನು ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಂದಿದ್ದು, ವಿದೇಶಕ್ಕೆ ರಪ್ತುಮಾಡುವ ಗುರಿಯಿದೆ ಎಂದು ಹೇಳಿದರು.