ಬಂಟ್ವಾಳ: ದೇಶದಾದ್ಯಂತ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮೂಲದ ಮೂವರು ಮಹಿಳೆಯರು ಕಾಲ್ನಡಿಗೆ ಮೂಲಕ ವಿಟ್ಲ ಪರಿಸರಕ್ಕೆ ಆಗಮಿಸಿದ್ದು, ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ಅವರು ಮೂವರು ಮಹಿಳೆಯರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆಶ್ರಯ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ನಾಸಿಕ ಎಂಬಲ್ಲಿಯ ಇಬ್ಬರು ವೃದ್ಧೆಯರು ಹಾಗೂ ಒಬ್ಬಳು ಮಹಿಳೆ ಸೇರಿದಂತೆ ಮೂವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರೈಲು ಹಾಗೂ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಾಲ್ನಡಿಗೆ ಮೂಲಕ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ಸಾಲೆತ್ತೂರು ಮೂಲಕ ಕೊಡಂಗಾಯಿ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಡಂಗಾಯಿ ಯುವಕರ ವಿಟ್ಲ ಎಸೈ ವಿನೋದ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿದ ಎಸೈ ಮೂವರನ್ನು ವಿಚಾರಿಸಿದ್ದಾರೆ. ಕೊಡಂಗಾಯಿಯಲ್ಲಿ ಅವರಿಗೆ ವಾಸ್ತವ್ಯ ನೀಡಲು ಮುಂದಾಗಿದ್ದರು. ಮಹಿಳೆಯರು ಅಲ್ಲಿ ನಿಲ್ಲಲು ನಿರಾಕರಿಸಿದ್ದಾರೆ. ಬಳಿಕ ಅವರನ್ನು ಫ್ರೆಂಡ್ಸ್ ವಿಟ್ಲ ಆಂಬ್ಯುಲೆನ್ಸ್ನಲ್ಲಿ ವಿಟ್ಲಕ್ಕೆ ಕರೆ ತಂದು ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರ ಮುಖಾಂತರ ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಅಲ್ಲಿಂದ ಮಹಿಳೆಯರು ಹೊರಗಡೆ ಹೋಗಲು ಪಟ್ಟು ಹಿಡಿದಿದ್ದರು. ಬಳಿಕ ಅವರ ಮನವೊಲಿಸಲಾಗಿತ್ತು.
ಬೆಳಗ್ಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅವರನ್ನು ಮಂಗಳೂರಿಗೆ ವರ್ಗಾಯಿಸುವುದಾಗಿ ತಿಳಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ದಿವಾಕರ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವೇದಾವತಿ ಬಲ್ಲಾಳ್ ಉಪಸ್ಥಿತರಿದ್ದರು.