ಪುತ್ತೂರು: ತಾಲೂಕಿನ ಬೆದ್ರಾಳ ಮತ್ತು ಕಾಡುಮನೆ ಸಮೀಪ ಅಲ್ಪಸಂಖ್ಯಾತ ಮೌಲಾನಾ ಆಜಾದ್ ಆಂಗ್ಲಮಾಧ್ಯಮ ಶಾಲೆಗೆ ಮಂಜೂರಾದ ಸ್ಥಳವನ್ನು ರದ್ದು ಪಡಿಸುವಂತೆ ಆಗ್ರಹಿಸಿದ ಸ್ಥಳೀಯರು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಶಾಸಕರಿಗೆ, ಸಹಾಯಕ ಆಯುಕ್ತರಿಗೆ, ತಹಶೀಲ್ದಾರಿಗೆ, ಪೌರಾಯುಕ್ತರಿಗೆ ನೀಡಿದ್ದಾರೆ.
ಅ. 3 ರಂದು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಲಿದೆ ಎಂಬ ಮಾಹಿತಿ ಪಡೆದು ಕೊಂಡಿದ್ದೇವೆ. ಆದರೆ, ಈ ಶಾಲೆಯ ಸ್ಥಳವನ್ನು 1968-69ರಂದು ಸರ್ವೆ ನಂಬರ್ 55/1ಎ, ಡಿಪಿ2. ವಿಸ್ತೀರ್ಣ 81 ಸೆಂಟ್ಸ್ ಜಾಗವನ್ನು ಬೆದ್ರಾಳದ ದಿ.ವೆಂಕಟ್ರಮಣ ಭಟ್ ಅವರ ಪುತ್ರ ದಿ.ಮಹಾಲಿಂಗ ಭಟ್ಟರು ಬೆದ್ರಾಳ ಹಿ. ಪ್ರಾ. ಶಾಲೆಗೆ ಭೂಮಿಯನ್ನು ದಾನವಾಗಿ ನೀಡಿದ್ದರು. ತದನಂತರ ಊರಿನವರ ಸಹಾಯದಿಂದ ಕೆಮ್ಮಿಂಜೆ, ನರಿಮೊಗ್ರು, ಚಿಕ್ಕಮುಡ್ನೂರು ಗ್ರಾಮ ಸಹಾಯದಿಂದ ಶಾಲೆ ನಿರ್ಮಾಣಗೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲಕರವಾಯಿತು.
ಕೂರ್ನಡ್ಕದಿಂದ ಬೆದ್ರಾಳದ ತನಕ ಅರ್ಧ ಕಿ.ಮೀಗೆ ಒಂದರಂತೆ ಮುಸ್ಲಿಮರ 2 ಮಸೀದಿ, 2 ಮದರಸಾ ಶಾಲೆಗಳಿವೆ. ಮುಂದೆ ಈ ಶಾಲೆಯನ್ನು ಯಾವ ಕಾರಣಕ್ಕೂ ಅಲ್ಪಸಂಖ್ಯಾತ ಮೌಲನಾ ಅಜಾದ್ ಆಂಗ್ಲಮಾಧ್ಯಮ ಶಾಲೆಗಾಗಿ ಮಂಜೂರು ಮಾಡಬಾರದು. ಒಂದು ವೇಳೆ ಮಂಜೂರು ಮಾಡಿದರೆ, ಅದನ್ನು ರದ್ದುಪಡಿಸಬೇಕು. ಬೆದ್ರಾಳ ಶಾಲೆಯನ್ನು ಸಾರ್ವಜನಿಕ ಶಾಲೆಯಾಗಿ ಅಥವಾ ಇತರ ಸರ್ಕಾರಿ ಇಲಾಖೆಗೆ ನೀಡುವುದರಲ್ಲಿ ನಮ್ಮ ಆಕ್ಷೇಪ ಇರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ ಅವರು, ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಶಂಕುಸ್ಥಾಪನೆಯ ಸಂದರ್ಭ ನಾವು ಧರಣಿ ಕುಳಿತುಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
ಸ್ಥಳೀಯರಾದ ಸೂರ್ಯ ಮರೀಲ್, ಕಿರಣ್, ಹರ್ಷಿತ್, ಸಂದೀಪ್, ರಾಜೇಂದ್ರ ಮರೀಲ್, ವೇಣು, ರಾಧಾಕೃಷ್ಣ, ದೀಪಕ್, ಪ್ರಕಾಶ್, ಶ್ಯಾಮಸುಂದರ ಮತ್ತಿತರರು ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.