ಮಂಗಳೂರು: ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಎಲ್ಲ ಮದ್ಯದಂಗಡಿಗಳಿಗೂ ಬೀಗಮುದ್ರೆ ಹಾಕಲಾಗಿದ್ದರೂ ನಗರದ ಹೆಚ್ಚಿನ ಮದ್ಯದಂಗಡಿಯಲ್ಲಿ ಮದ್ಯ ಖಾಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಎಲ್ಲ ಮದ್ಯದಂಗಡಿಗಳನ್ನು ತಪಾಸಣೆ ಮಾಡುವಂತೆ ಅಬಕಾರಿ ಆಯುಕ್ತರಿಗೆ ಆದೇಶ ಮಾಡಿದ್ದಾರೆ.
ಲಾಕ್ಡೌನ್ನಿಂದ ಮದ್ಯದಂಗಡಿಗೆ ಸೀಲ್ ಆದ ಬಳಿಕ ಯಾವುದೇ ಮದ್ಯದಂಗಡಿಯಲ್ಲಿ ಮದ್ಯದ ದಾಸ್ತಾನಿನಲ್ಲಿ ವ್ಯತ್ಯಾಸಗಳಾದಲ್ಲಿ, ಮದ್ಯ ಮಾರಾಟ ಅಥವಾ ಸಾಗಣೆ ಬಗ್ಗೆ ಖಚಿತವಾದಲ್ಲಿ ಅಂತಹ ಮದ್ಯ ಸನ್ನದುದಾರರನ್ನು ತನಿಖೆಗೊಳಪಡಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮದ್ಯದಂಗಡಿಯಲ್ಲಿ ತಪಾಸಣೆ ಮಾಡುವ ಸಂದರ್ಭ ಸನ್ನದುದಾರರ ಸಮಕ್ಷಮದಲ್ಲಿ ಮದ್ಯದಂಗಡಿಗಳನ್ನು ತೆರೆದು ಸೂಕ್ತ ಮಹಜರು, ವಿಡಿಯೋ ಚಿತ್ರೀಕರಣದೊಂದಿಗೆ ತಪಾಸಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಲಾಕ್ಡೌನ್ ಪೂರ್ವದಲ್ಲಿದ್ದ ಪ್ರಮಾಣಕ್ಕಿಂತ ಯಾವುದೇ ಮದ್ಯ, ಬಿಯರ್, ವೈನ್ಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸದರಿ ಸನ್ನದುದಾರರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದಾರೆ.