ಪುತ್ತೂರು: ಸಿಎಂ ಪರಿಹಾರ ನಿಧಿಗೆ ಕೊರೊನಾ ಸಂಕಷ್ಟಕ್ಕೆಂದು ಸಾರ್ವಜನಿಕರಿಂದ 290 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. ಆದರೆ, ರಾಜ್ಯ ಸರ್ಕಾರ ಕೊರೊನಾ ಸಂಕಷ್ಟಕ್ಕೆ ಒಳಗಾದ ಜನರಿಗೆ ವಿನಿಯೋಗಿಸಿಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆರೊಪಿಸಿದರು.
ಈ ಕುರಿತು ಮಾತನಾಡಿದ ಅವರು, ಈ ಹಣ ಕೊರೊನಾ ತುರ್ತು ಸೇವೆಗೆ ಮೀಸಲಿಡಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ನಿರುದ್ಯೋಗ, ಆರ್ಥಿಕ ಕುಸಿತ ಇವೆಲ್ಲಾ ತುರ್ತುಸ್ಥಿತಿ ಅಲ್ಲವೇ ಎಂದು ಪ್ರಶ್ನಿಸಿದರು.
![Let the government inform Corona Relief Fund appropriations](https://etvbharatimages.akamaized.net/etvbharat/prod-images/kn-mng-01-welfer-party-of-india-dk-puttur-script-kac10010_04072020210436_0407f_1593876876_266.jpg)
ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಅವರು ಸಿಎಂ ಪರಿಹಾರ ನಿಧಿಯ ವಿವರ ಕೋರಿ ಅರ್ಜಿ ಸಲ್ಲಿಸಿದ ಬಳಿಕ 140 ಕೋಟಿ ರೂ. ಕಲ್ಯಾಣ ನಿಧಿಗೆ ಬಳಕೆಯಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ನಾವು ಇದನ್ನು ಬಹಿರಂಗಪಡಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ತರಾತುರಿಯಲ್ಲಿ ಕಲ್ಯಾಣ ನಿಧಿಗೆ ಹಣಕೊಟ್ಟಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಈ ಮೂಲಕ ಬಿಜೆಪಿಯ ನಿಜಬಣ್ಣ ಬಯಲಾಗಿದೆ ಎಂದರು.
ಇಲ್ಲದಿದ್ದಲ್ಲಿ ಬಿಜೆಪಿ ಮುಂದಿನ ಅಕ್ಟೋಬರ್ನಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನರಿಂದ ಸಂಗ್ರಹಿಸಿದ ಹಣವನ್ನು ಕೂಡಿಡುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಆದ್ದರಿಂದ ಸಾರ್ವಜನಿಕರಿಂದ ಸಂಗ್ರಹಿಸಿರುವ ನಿಧಿಯ ವೆಚ್ಚ ಮತ್ತು ಉಳಿಕೆಯ ಮಾಹಿತಿಯನ್ನು ಸರ್ಕಾರ ಕೂಡಲೇ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.