ಮಂಗಳೂರು: ರಾಜ್ಯದಲ್ಲಿ ಕೋವಿಡ್ ಸಲಕರಣೆ ಖರೀದಿಯಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ತಕ್ಷಣ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಶಾಸಕ ಐವನ್ ಡಿಸೋಜ ಹೇಳಿದ್ದಾರೆ.
ಕೋವಿಡ್ ಸಲಕರಣೆ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 3,300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಅಂಕಿಅಂಶಗಳ ಮೂಲಕ ಮಾಡಿರುವ ಆರೋಪವನ್ನು ಯಾವುದೇ ದಾಖಲೆಗಳನ್ನು ನೀಡದೆ, ಬರೀ ಬಾಯಿಮಾತಿನ ಮೂಲಕ ಆರೋಗ್ಯ ಸಚಿವರು ತಳ್ಳಿಹಾಕಿದ್ದಾರೆ. ಹೈಕೋರ್ಟ್ ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ 'ಒಂದು ವೆಂಟಿಲೇಟರ್ಗೆ 12 ಲಕ್ಷ ರೂ.ನಂತೆ ಒಂದು ಸಾವಿರ ವೆಂಟಿಲೇಟರ್ ಖರೀದಿ ಮಾಡಲಾಗಿದೆ' ಎಂದು ಅಫಿಡವಿತ್ ಸಲ್ಲಿಸಿದೆ. ಆದರೆ ಅದರ ಮಾರುಕಟ್ಟೆ ಬೆಲೆ ಬರೀ ನಾಲ್ಕು ಲಕ್ಷ ರೂ. ಮಾತ್ರ. ಹಾಗಾದರೆ ನೀವು ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿತ್ ಸುಳ್ಳೇ ಎಂದು ಪ್ರಶ್ನಿಸಿದರು.
ತಮಿಳುನಾಡು, ಆಂಧ್ರಪ್ರದೇಶದಲ್ಲಿ ವೆಂಟಿಲೇಟರ್ ಖರೀದಿಯ ಅತೀ ಹೆಚ್ಚಿನ ಬೆಲೆ 6.50 ಲಕ್ಷ ರೂ. ಅಲ್ಲದೇ ನೀವು ಯಾವುದೇ ಪೆನಲ್ನಲ್ಲಿ ಇಲ್ಲದ ಗುತ್ತಿದಾರರೊಂದಿಗೆ ವೆಂಟಿಲೇಟರ್ ಖರೀದಿ ಮಾಡಿದ್ದೀರಿ. ಅದು ಬಿಡಿಭಾಗಗಳನ್ನು ಜೋಡಿಸಿ ಕೊಡುವ ಕಂಪನಿಯೇ ಹೊರತು ಬ್ರಾಂಡೆಡ್ ಕಂಪನಿಯೇ ಅಲ್ಲ. ಇಷ್ಟೆಲ್ಲಾ ಆದರೂ ಅವ್ಯವಹಾರವೇ ಆಗಿಲ್ಲ ಎನ್ನುವಿರಿ. ಒಂದು ವೇಳೆ ವೆಂಟಿಲೇಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸಾಬೀತಾದಲ್ಲಿ ಒಂದು ನಿಮಿಷವೂ ಸಚಿವ ಸ್ಥಾನದಲ್ಲಿ ಇರಬಾರದು ಎಂದರು.