ಮಂಗಳೂರು : ಕಾನೂನು ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ಅವರನ್ನು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಈ ಹಿನ್ನೆಲೆ ಅವರು ಮುಂದಿನ ಆದೇಶದವರೆಗೂ ಪ್ರಾಕ್ಟೀಸ್ ಮಾಡದಂತೆ ಸೂಚಿಸಲಾಗಿದೆ.
ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ನೇತೃತ್ವದ ಸಮಿತಿ ಅಮಾನತು ಮಾಡಿದೆ.
ನ್ಯಾಯವಾದಿ ರಾಜೇಶ್ ವಿರುದ್ಧದ ಆರೋಪದ ಎಫ್ಐಆರ್ ಹಾಗೂ ದೂರುಗಳನ್ನು ಪರಿಶೀಲಿಸಿದ ಬಳಿಕವೇ ಸುಮೊಟೊ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೆ ಅವರಿಗೆ ಎಸಿಬಿ ಎಸ್‌ಪಿಪಿಯಾಗಿ ಕಾರ್ಯನಿರ್ವಹಿಸದಿರಲು ಸೂಚನೆ ಕೊಡಲಾಗಿದೆ.
ಎಸಿಬಿ ಪೊಲೀಸ್ ಅಧೀಕ್ಷಕರಿಂದ ಸೂಚನಾ ಪತ್ರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸಿಬಿ ಪ್ರಕರಣಗಳಲ್ಲಿ ಅಭಿಯೋಜನೆ ಮಾಡದಂತೆ ಅವರಿಗೆ ಸೂಚಿಸಲಾಗಿದೆ. ರಾಜೇಶ್ ಭಟ್ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸಿಬಿ ಎಸ್ಪಿಪಿ ಆಗಿ ನಿಯೋಜನೆಗೊಂಡಿದ್ದ ರಾಜೇಶ್ ಭಟ್ಗೆ ಕಾರ್ಯನಿರ್ವಹಿಸದಿರಲು ಸೂಚಿಸಲಾಗಿದೆ.
ಅಷ್ಟೇ ಅಲ್ಲ, ಆರೋಪಿ ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ಸನ್ನದುವನ್ನೂ ಅಮಾನತು ಮಾಡಲಾಗಿದೆ. ಕರ್ನಾಟಕ ವಕೀಲರ ಪರಿಷತ್ನಿಂದ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ವಕೀಲ ಕೆ ಎಸ್ ಎನ್ ರಾಜೇಶ್ ವಿರುದ್ಧ ವಿಚಾರಣೆ ನಡೆಸಲು ಬಾರ್ ಕೌನ್ಸಿಲ್ ನಿರ್ಧಾರ ಮಾಡಿದೆ. ಬಾರ್ ಕೌನ್ಸಿಲ್‌ನಿಂದ ಅಮಾನತು ಆಗಿರುವುದರಿಂದ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸದಂತೆ ಮಾಡುವ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆ.