ಉಳ್ಳಾಲ: ತಲಪಾಡಿ ಗಡಿಯಲ್ಲಿ ಮುಕ್ತ ಸಂಚಾರ ಸಂಬಂಧ ಸಮಾಲೋಚನೆ ವೇಳೆ ಕೇರಳ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಶುಕ್ರವಾರ ಸಂಜೆ ತಲಪಾಡಿ ಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತುಕತೆ ನಡೆಯಿತು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತನಾಡಿ, ಗುರುವಾರದಿಂದ ತಲಪಾಡಿ ಗಡಿಯ ಮಂಜೇಶ್ವರ, ವರ್ಕಾಡಿ ಮತ್ತು ಮೀಂಜ ಪಂಚಾಯತಿಯವರಿಗೆ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಉಳಿದ ಪಂಚಾಯತಿಯವರ ಸಂಚಾರಕ್ಕೆ ಜಿಲ್ಲಾಧಿಕಾರಿಯಿಂದ ಯಾವುದೇ ಆದೇಶ ಬಂದಿಲ್ಲ. ಸಂಚಾರಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿ ಆದೇಶ ಅಗತ್ಯ ಎಂದು ತಿಳಿಸಿದರು.
ಆಗ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ನಿರ್ದೇಶನದಂತೆ ಉಳಿದ ಎಲ್ಲಾ ಪಂಚಾಯತಿಯವರಿಗೂ ಮುಕ್ತ ಸಂಚಾರ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆ ಈಡೇರುವವರೆಗೂ ಬಿಜೆಪಿ ತನ್ನ ಹೋರಾಟ ಮುಂದುವರೆಸಲಿದೆ ಎನ್ನುತ್ತಿದ್ದಂತೆ, ಪೊಲೀಸರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನವೀನ್ ರಾಜ್ ಕೆ.ಜೆ., ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ್ ಇತರರು ಈ ಸಂದರ್ಭದಲ್ಲಿದ್ದರು.