ಪುತ್ತೂರು: ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿರುವ ಭೂ ಮಸೂದೆ ಹಾಗೂ ಎಪಿಎಂಸಿ ಕಾಯ್ದೆ ರೈತ ವಿರೋಧಿಯಾಗಿವೆ. ಈ ಮಸೂದೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಬಾರದು ಹಾಗೂ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆಗ್ರಹಿಸಿದರು.
ಶನಿವಾರ ಮಾತನಾಡಿದ ಅವರು, ರೈತರು, ಕಾರ್ಮಿಕರು ದೇಶದ ಬೆನ್ನೆಲುಬು. ರೈತರನ್ನು ಬಂಡವಾಳ ಶಾಹಿಗಳು ಗುಲಾಮರನ್ನಾಗಿಸುವುದಲ್ಲದೆ ರೈತರನ್ನು ಸಂಪೂರ್ಣ ನಾಶ ಮಾಡುವ ಹುನ್ನಾರ. ರೈತರು ದೇಶದ ಅಭಿವೃದ್ಧಿ ಯೋಧರು. ಆದರೆ ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳು, ಬಂಡವಾಳ ಶಾಹಿಗಳನ್ನು ಸಂರಕ್ಷಿಸಲು ರೈತರನ್ನು ಬಲಿಕೊಡುತ್ತಿದೆ ಎಂದು ಆರೋಪಿಸಿದರು.
ಲೋಕಸಭೆಯಲ್ಲಿ ಈ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಬೀದಿಗಳಿದು ಹೋರಾಟ ನಡೆಸುತ್ತಿದ್ದರು, ಸರ್ಕಾರ ಗಮನಕೊಡದೇ ಮಸೂದೆ ಜಾರಿ ಮಾಡಲು ಪ್ರಯತ್ನಿಸಿದೆ. ಇದರ ವಿರುದ್ಧ ಸೆ.28 ರಂದು ಕರ್ನಾಟಕ ಬಂದ್ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟಿಸಲಿದ್ದೇವೆ. ರೈತ ಸಂಘದಿಂದ ಬಸ್ ನಿಲ್ದಾಣದ ಬಳಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ ನಾವು ಬೆಂಬಲ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಸಿಪಿಎಂ ಸದಸ್ಯ, ಡಿವೈಎಫ್‌ಐ ಕಾರ್ಯಕರ್ತ ತುಳಸಿದಾಸ್, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಉಪಸ್ಥಿತರಿದ್ದರು.