ಸುಳ್ಯ (ದಕ್ಷಿಣ ಕನ್ನಡ): ಸುಬ್ರಹ್ಮಣ್ಯ ರಬ್ಬರ್ ನಿಗಮದಲ್ಲಿ ರಬ್ಬರ್ ಮರಗಳಿಗೆ ಔಷಧ ಸಿಂಪಡಣೆಯಲ್ಲಿ ಅವ್ಯವಹಾರ ನಡೆದಿರುವ ಕುರಿತಂತೆ ಮಾಹಿತಿ ನೀಡಿದ್ದಾರೆಂಬ ಕಾರಣದಿಂದಾಗಿ ಕಾರ್ಮಿಕರನ್ನೇ ಕೆಲಸದಿಂದ ವಜಾ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎಸ್ ಅಂಗಾರ ಅವರ ನೇತೃತ್ವದಲ್ಲಿ ಐತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಮಿಕರು ಅರಣ್ಯ ನಿಗಮದಲ್ಲಿ ನಡೆದ ಬೆಳವಣಿಗೆಯನ್ನು ವಿವರಿಸಿದರು. ಈ ಕುರಿತು ಶಾಸಕ ಎಸ್. ಅಂಗಾರ ಅವರು ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ಬೇಡ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಧಿಕಾರಿಗಳಿಂದ ಉತ್ತರ ಇನ್ನಷ್ಟೇ ಬರಬೇಕಿದೆ ಎಂದರು.
ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನೇ ರಬ್ಬರ್ ಪ್ಲಾಂಟೇಶನ್ಗೆ ಕರೆಸಿ ಇಲ್ಲಿನ ವಾಸ್ತವತೆಯನ್ನು ಸಚಿವರಿಗೆ ಮನವರಿಕೆ ಮಾಡಲಾಗುವುದು. ಕೂಡಲೇ ಸಚಿವರ ದಿನಾಂಕವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ರಸ್ತೆ ಬದಿಯ ಚರಂಡಿಗಳನ್ನು ದುರಸ್ಥಿ ಮಾಡದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕೊರೊನಾ ಕಾರಣದಿಂದಾಗಿ ಈ ಕೆಲಸಕ್ಕೆ ಅಡ್ಡಿಯಾಗಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.