ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾದಲ್ಲಿ ದೈವವು ಹಾಕಿದ ನೈವೇದ್ಯ ಸ್ವೀಕರಿಸಲು ಈ ಬಾರಿ ದೇವರ ಮೀನುಗಳೇ ಇರಲಿಲ್ಲ ಎನ್ನಲಾಗಿದ್ದು, ದೈವ ಅಸಮಾಧಾನ ವ್ಯಕ್ತಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಿಂದಿನಿಂದಲೂ ಪವಾಡಗಳಿಗೆ ಮತ್ತು ಹಲವಾರು ವೈಶಿಷ್ಠ್ಯಗಳಿಗೆ ಹೆಸರಾದ ನಾಗಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಂಪಾಷಷ್ಠಿ ಸಮಯದಲ್ಲಿ ಭಕ್ತರಂತೆ ಮೀನುಗಳೂ ಬರುತ್ತದೆ ಎನ್ನುವುದು ಇಲ್ಲಿನ ವಿಶೇಷ ನಂಬಿಕೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುತ್ತದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು, ದೂರದ ಏನೆಕಲ್ಲ-ಸಂಕಪಾಲದ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ ಎನ್ನಲಾಗಿದೆ. ಜಾತ್ರೆ ಮುಗಿಯುವವರೆಗೂ ಈ ಮೀನುಗಳು ಇಲ್ಲೇ ಇದ್ದು, ದೇವಸ್ಥಾನದ ಜಾತ್ರೆಯ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುತ್ತದೆ ಎನ್ನುವುದು ನಂಬಿಕೆಯಾಗಿದೆ.
ಇದನ್ನೂ ಓದಿ: ಕುಕ್ಕೆಯಲ್ಲಿ ಹುಂಡಿ ಎಣಿಕೆ ವೇಳೆ ಹಣ ಕದ್ದು ಸಿಕ್ಕಿಬಿದ್ದ ಮಹಿಳಾ ಸಿಬ್ಬಂದಿ
ಆದರೆ ಈ ಬಾರಿ ದೈವ ಹಾಕಿದ ನೈವೇದ್ಯ ಸ್ವೀಕರಿಸಲು ದೇವರ ಮೀನುಗಳೇ ಇರಲಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದು, ಮೀನುಗಳು ಇರದಿರುವುದನ್ನು ಕಂಡು ದೈವವೂ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಕುಮಾರಧಾರಾ ಸ್ನಾನಘಟ್ಟದಲ್ಲಿ ಭಕ್ತರಿಗೆ ತೀರ್ಥಸ್ನಾನ ನೆರವೇರಿಸಲು ನೀರನ್ನು ಶೇಖರಿಸಲು ಮೀನುಗಳಿಂದ ತುಂಬಿದ್ದ ಸ್ನಾನಘಟ್ಟದ ಬಳಿ ಜೆಸಿಬಿ ಬಳಸಿ ಹೂಳು ತೆಗೆಯಲಾಗಿತ್ತು. ಯಂತ್ರಗಳ ಶಬ್ದಕ್ಕೆ ಹೆದರಿದ ಮೀನುಗಳು ಸ್ನಾನಘಟ್ಟದಿಂದ ಬೇರೆ ಕಡೆಗೆ ಸ್ಥಳಾಂತರಗೊಂಡಿವೆ ಎಂಬ ಆರೋಪವೂ ಕೇಳಿಬಂದಿದೆ.
ತೀರ್ಥಸ್ನಾನ ನೆರವೇರಿಸುವ ಸ್ನಾನಘಟ್ಟದ ಬಳಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಆರಂಭಕ್ಕೆ ಮೊದಲೇ ಹೂಳು ತೆಗೆಯುವ ವ್ಯವಸ್ಥೆಯನ್ನು ಪ್ರತೀ ವರ್ಷ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಜಾತ್ರೆ ಆರಂಭಗೊಂಡ ಬಳಿಕ ಹೂಳು ತೆಗೆಯುವ ಕಾಮಗಾರಿ ನಡೆಸಲಾಗಿದೆ. ಇದರಿಂದಾಗಿ ಮೀನುಗಳು ನೈವೇದ್ಯ ಸ್ವೀಕರಿಸುವ ಮೊದಲೇ ಬೇರೆಡೆಗೆ ಹೋಗಿವೆ ಎನ್ನಲಾಗಿದೆ.