ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನಿರಾಶ್ರಿತರಿಗೆ ನೀಡಿದ ಆಹಾರ ಚೆಲ್ಲಿದ್ದು ಇದು ದೇವಸ್ಥಾನದ ಪಾವಿತ್ರ್ಯತೆ ಬಗ್ಗೆ ಅಷ್ಟಾಗಿ ಬಗ್ಗೆ ತಿಳುವಳಿಕೆ ಇಲ್ಲದ ಹೊರರಾಜ್ಯದ ಕಾರ್ಮಿಕರಿಂದ ಆಗಿರುವ ಘಟನೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಸ್ಪಷ್ಟನೆ ನೀಡಿದ್ದಾರೆ.
![waste of food case](https://etvbharatimages.akamaized.net/etvbharat/prod-images/kn-dk-02-kukke-food-brk-pho-kac10008_11052020160137_1105f_1589193097_374.jpg)
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಅಭಯ ವಸತಿಗೃಹದಲ್ಲಿ ಹೊರರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕ ನಿರಾಶ್ರಿತರಿಗೆ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ವತಿಯಿಂದ ಉಚಿತ ಭೊಜನ ನೀಡಲಾಗುತ್ತಿದೆ. ಆದರೆ, ಕೆಲವು ದಿನಗಳ ಹಿಂದೆ ಇಲ್ಲಿ ಆಹಾರ ಚೆಲ್ಲುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಈ ಘಟನೆ ಚರ್ಚೆಗೆ ಗ್ರಾಸವಾಗಿತ್ತು.
![waste of food case](https://etvbharatimages.akamaized.net/etvbharat/prod-images/kn-dk-02-kukke-food-brk-pho-kac10008_11052020160137_1105f_1589193097_393.jpg)
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವಸ್ಥಾನದ ಆಡಳಿತಾಧಿಕಾರಿಗಳು, ದೇವಸ್ಥಾನದ ವತಿಯಿಂದ ನಿರಾಶ್ರಿತರಿಗೆ ಅನ್ನ ನೀಡಲಾಗುತ್ತಿತ್ತು. ಇಲ್ಲಿನ ಬಹುತೇಕ ಅನ್ಯಭಾಷಿಗರು ಅನ್ನವನ್ನು ಚೆಲ್ಲುತ್ತಿರುವುದು ಗಮನಕ್ಕೆ ಬಂದಿದೆ. ಇದು ನಮ್ಮ ಗಮನಕ್ಕೆ ಬಂದ ಕೂಡಲೇ ಅವರಿಗೆ ಅನ್ನ ನೀಡುವುದನ್ನು ನಿಲ್ಲಿಸಲಾಗಿದ್ದು, ಚಪಾತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಈ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾತ್ರವಲ್ಲದೆ ಈ ತರಹ ಇವರು ಅನ್ನವನ್ನು ಬಿಸಾಡಿರುವುದರಲ್ಲಿ ನಮಗೂ ಬೇಸರ ಇದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.