ಮಂಗಳೂರು: ನಗರದ ಪಡೀಲ್ ಕಣ್ಣೂರು ರೈಲ್ವೆ ಬ್ರಿಡ್ಜ್ ಬಳಿ ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ಕ್ಷುಲ್ಲಕ ಕಾರಣಕ್ಕೆ ನಿಂದಿಸಿ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಅಡ್ಯಾರ್ ಕಣ್ಣೂರು, ಕುಂಡಾಲ ನಿವಾಸಿ ಸೊಹೀಫ್ (19) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ಪುತ್ತೂರು ಡಿಪೋದ ಕೆಎಸ್ಆರ್ಟಿಸಿ ಬಸ್ ಚಾಲಕ ರಾಜು ಗಜಕೋಶ ಅವರು ಎಂದಿನಂತೆ ಇಂದು ಬೆಳಗ್ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದರು. ಬಸ್ ಪಡೀಲ್ ಕಣ್ಣೂರು ತಲುಪುತ್ತಿದ್ದ ಸಂದರ್ಭ ಬೆಳಗ್ಗೆ 8.50ರ ಸುಮಾರಿಗೆ ಡಿಯೋ ಸ್ಕೂಟರ್ ಸವಾರನೋರ್ವ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ.
ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಕೆಎಸ್ಆರ್ಟಿಸಿ ಬಸ್ಸಿಗೆ ಡಿಯೋ ಸ್ಕೂಟರ್ನನ್ನು ಅಡ್ಡಲಾಗಿಟ್ಟು ಸ್ಕೂಟರ್ನಿಂದ ಇಳಿದು, ಆರೋಪಿ ಸೊಹಿಫ್ ಬಸ್ನ ಡೋರ್ ಎಳೆದು ಭಾರಿ ವೇಗವಾಗಿ ಬಸ್ ಚಲಾಯಿಸುತ್ತೀಯಾ ಎಂದು ನಿಂದಿಸಿದ್ದಾನೆ. ಬಳಿಕ ಸ್ಕೂಟರ್ನಿಂದ ಚಾಕು ತಂದು ಚಾಲಕ ರಾಜು ಗಜಕೋಶ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣ ಅವರು ಹಿಂದಕ್ಕೆ ಸರಿದು ತಪ್ಪಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಮಟ್ಕಾ ದಂಧೆ ಅಡ್ಡೆಗಳ ಮೇಲೆ ಸಿಸಿಬಿ ದಾಳಿ, ಐವರ ಬಂಧನ
ಈ ಬಗ್ಗೆ ಬಸ್ ಚಾಲಕ ರಾಜು ಗಜಕೋಶರವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.