ಬೆಳ್ತಂಗಡಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಜು. 31 ರಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.
ಜನರು ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದು, ಅವರಿಗೆ ರಕ್ಷಣೆ ಕೊಡುವ ಬದಲು ಬಿಜೆಪಿ ಸರ್ಕಾರ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಲೂಟಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಜನರ ಮುಂದೆ ಇಡುತ್ತಿದ್ದಂತೆ ಬಿಜೆಪಿ ಸರ್ಕಾರ ಭ್ರಮನಿರಸನಗೊಂಡು ಜನರ ಹಾದಿ ತಪ್ಪಿಸಲು ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದು, ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂಬ ಬೆದರಿಕೆ ತಂತ್ರವನ್ನು ಉಪಯೋಗಿಸುತ್ತಿದೆ. ವಿಡಿಯೋ ಇದ್ದರೆ ತಕ್ಷಣ ಬಿಡಗಡೆ ಮಾಡಲಿ. ಎಂಥಾ ಸವಾಲುಗಳನ್ನು ಗೆದ್ದಿದ್ದೇನೆ. ವಿಡಿಯೋ ಬಿಡುಗಡೆ ಬೆದರಿಕೆಯನ್ನು ಎದುರಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಂಥಾಹ್ವಾನ ನೀಡಿದರು.
ಅವರು ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಮಧ್ಯೆ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭವ್ಯ ಸ್ವಾಗತ ಸ್ವೀಕರಿಸಿ ಬಳಿಕ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊರೊನಾ ವೈದ್ಯಕೀಯ ಉಪಕರಣ ಖರೀದಿಯಲ್ಲಿ ದಾಖಲೆಗಳನ್ನು ಇಟ್ಟುಕೊಂಡೇ ಆರೋಪ ಮಾಡಲಾಗಿದೆ. ಇಂತಹ ಕೆಲವು ದಾಖಲೆಗಳು ಮಾಧ್ಯಮದಲ್ಲಿಯೂ ಬಿಡುಗಡೆಗೊಂಡಿದೆ. ದುಪ್ಪಟ್ಟು ವೆಚ್ಚದಲ್ಲಿ ಖರೀದಿ ಮಾಡಿದ್ದೇವೆ ಎಂದು ಸರ್ಕಾರದ ಖಜಾನೆಯಿಂದ ಹಣ ಪಡೆದಿದ್ದು, ಮತ್ತೆ ಕೆಲವೊಂದು ಉಪಕರಣಗಳನ್ನು ಬಾಡಿಗೆಗೆ ಖರೀದಿಸಿದ ದಾಖಲೆಗಳು ನಮ್ಮಲ್ಲಿವೆ ಎಂದರು. ಇನ್ನು ಯೋಗೇಶ್ವರ್ ನನ್ನ ಕಾಲು ಹಿಡಿದು ಬೇಡಿಕೊಂಡಿದ್ದಾನೆ ಎಂದು ಆರೋಪಿಸಿದ್ದು, ಇದಕ್ಕೆ ಪತ್ಯುತ್ತರ ನೀಡಿದ ಯೋಗೇಶ್ವರ್ ಡಿಕೆಶಿಯವರ ಮನೆಯಲ್ಲಿ ಮತ್ತು ರಸ್ತೆಯಲ್ಲಿ ಸಿಸಿ ಕ್ಯಾಮರಾ ಇದೆ. ತಾಕತ್ತಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ ಕೂಡಾ.
ಕರಾವಳಿ ಭಾಗದಲ್ಲಿ ಇರುವಂತಹ ಆಟೋ ಚಾಲಕರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಇನ್ನಿತರ ಕುಲ ಕಸುಬು ಮಾಡುತ್ತಿರುವವರಿಗೆ ಅನುದಾನ ಬಿಡಗಡೆ ಮಾಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ ಇದುವರೆಗೂ ಬಿಡುಗಡೆ ಮಾಡದೇ ಅನ್ಯಾಯ ಮಾಡಿದೆ. ಸರ್ಕಾರಕ್ಕೆ ಕೆಲಸ ಮಾಡುವ ಇಚ್ಚಾಶಕ್ತಿ ಇದ್ದರೆ ಪಂಚಾಯತ್ ಮೂಲಕ ಹಣ ಬಿಡುಗಡೆ ಮಾಡಿ ನೀಡಿ ಇಂತಹ ಕುಟುಂಬಗಳಿಗೆ ನೆರವು ನೀಡಬಹುದಿತ್ತು. ಆದರೆ, ನಿರ್ವಹಣೆಯಲ್ಲಿ ವಿಫಲತೆ ಕಂಡ ಸರ್ಕಾರದ ನಡವಳಿಕೆ ಈ ಭಾಗದ ಜನರಿಗೆ ಅರ್ಥವಾಗಿದ್ದು, ಇದನ್ನು ಇನ್ನಷ್ಟು ತಿಳಿಯಲು ಕರಾವಳಿ ಭಾಗಕ್ಕೆ ಭೇಟಿ ನೀಡಿದ್ದೇನೆ ಎಂದರು.
ನೆರೆ ಬಂದು ಒಂದು ವರ್ಷವಾದರೂ ಮನೆಕಟ್ಟಲು, ಇನ್ನಿತರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಅನಾಹುತವಾಗಿದ್ದು, ಇಲ್ಲಿಯೂ ಕೂಡ ಪರಿಹಾರ ನೀಡಿಲ್ಲ ಎಂದು ಇಲ್ಲಿನ ನಮ್ಮ ಪಕ್ಷದ ಮುಖಂಡರಿಂದ ತಿಳಿದಿದೆ. ಇದೇ ಸ್ಥಿತಿ ರಾಜ್ಯಾದ್ಯಂತ ಇದ್ದು ನೊಂದವರ ಪರ ಕಾಂಗ್ರೆಸ್ ನಿಂತು ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಹಿರಿಯರಾದ ಆಸ್ಕರ್ ಫರ್ನಾಂಡಿಸ್, ಜನಾರ್ಧನ ಪೂಜಾರಿ, ಇವರ ಆರೋಗ್ಯ ಕ್ಷೇಮ ವಿಚಾರಿಸಲು ಬಂದಿದ್ದು, ಜೊತೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಪ್ರಾರ್ಥನೆಗಾಗಿ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆಯಲು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದೇನೆ. ಮಂಜುನಾಥನ ಆಶೀರ್ವಾದದಂತೆ ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ ಎಂದರು.