ಬಂಟ್ವಾಳ: ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳನ್ನು ಕೇವಲ ಜಲಸಮೃದ್ಧಿಗೆ ಅಂದರೆ ಅಂತರ್ಜಲ ವೃದ್ಧಿಗೆ ಹಾಗೂ ಸ್ಥಳೀಯ ಕೃಷಿ ಅಗತ್ಯಗಳಿಗೆ ನೀರಿನ ಸೆಲೆಯನ್ನು ಕ್ರೋಢೀಕರಿಸುವ ಸಲುವಾಗಿ ನಿರ್ಮಿಸಲಾಗುತ್ತದೆ. ಆದರೆ, ಬ್ರಿಡ್ಜ್ ಕಂ ಬ್ಯಾರೇಜ್ ಹಾಗಲ್ಲ. ಇದರಿಂದ ಜಲಸಮೃದ್ಧಿಯಷ್ಟೇ ಅಲ್ಲ, ಎರಡು ಗ್ರಾಮ, ಸಂಪರ್ಕವೇ ಅಸಾಧ್ಯವಾಗಿರುವ ಎರಡು ಪ್ರದೇಶಗಳನ್ನು ಬೆಸೆಯುವ ಕಾರ್ಯವನ್ನೂ ಮಾಡಲಾಗುತ್ತದೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಕೃಷ್ಣಾಪುರ, ಸಜಿಪಮೂಡ ಗ್ರಾಮದ ಕಲ್ಲಗುಂಡಿ, ಸಂಗಬೆಟ್ಟು ಅಂಗರಕುಮೇರು, ಕುಕ್ಕಿಪ್ಪಾಡಿ ಗ್ರಾಮದ ಈಜಪಲ, ರಾಯಿ ಗ್ರಾಮದ ಸಾಲುಕೋಡಿ, ಕರೋಪಾಡಿ ಗ್ರಾಮದ ಪಾಲಿಗೆ, ಮಣಿನಾಲ್ಕೂರು ಗ್ರಾಮದ ಅಡ್ಡತಡ್ಕ, ಸಜಿಪಮುನ್ನೂರು ಗ್ರಾಮದ ಶಂಕರಲಚ್ಚಿಲ ಮಂಜಲ್ಪಾದೆ, ಅಜ್ಜಿಬೆಟ್ಟು ಗ್ರಾಮದಲ್ಲಿ ಇಂಥ ಬ್ರಿಡ್ಜ್ ಕಂ ಬ್ಯಾರೇಜ್ಗಳಿವೆ.
ಜಲಸಂರಕ್ಷಣೆಗೆ ನೆರವು: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಉಳಿಯತ್ತಡ್ಕ, ಕೊಳ್ನಾಡು ಗ್ರಾಮದ ನೆಕ್ಕರೆಕಾಡಗಳಲ್ಲಿ ದೊಡ್ಡ ಪ್ರಮಾಣದ ಕಿಂಡಿ ಅಣೆಕಟ್ಟುಗಳು ಕಾರ್ಯಾಚರಿಸುತ್ತಿದ್ದರೆ, ಮಾರ್ನಬೈಲ್ ನಿಂದ ಪಣೋಲಿಬೈಲ್ ರಸ್ತೆಯಲ್ಲಿ ಸಾಗಿ ಎಡಕ್ಕೆ ಚಲಿಸಿದಾಗ ಎದುರಾಗುತ್ತಿದ್ದ ತೋಡಿಗೆ ನಿರ್ಮಿಸಲಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಗ್ರಾಮಗಳನ್ನೇ ಸಂಪರ್ಕಿಸುತ್ತದೆ.
2019-20ರಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಶಾಸಕರ ಪ್ರದೇಶಾಭಿವೃದ್ಧಿ ವಿಶೇಷ ಘಟಕ ಯೋಜನೆಯಡಿ ನಿರ್ಮಾಣಗೊಂಡ 1 ಕೋಟಿ ರೂ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಇದು. ಇದು ಸುಮಾರು 27.10 ಮೀಟರ್ ಅಗಲದ ತೋಡಿಗೆ ನಿರ್ಮಿಸಲಾಗಿದ್ದು, 3.25 ಮೀಟರ್ ಎತ್ತರದಲ್ಲಿ ಪಿಲ್ಲರ್ ಗಳನ್ನು ಹಾಕಲಾಗಿದೆ. 3 ಮೀಟರ್ ಡೆಕ್ ಸ್ಲ್ಯಾಬ್ ಅದರ ಮೇಲ್ಭಾಗದಲ್ಲಿದ್ದು, ಫೈಬರ್ ತಂತ್ರಜ್ಞಾನದ (ಎಫ್.ಆರ್.ಸಿ.) ಹಲಗೆಯನ್ನು ಅಳವಡಿಸಲಾಗಿದೆ.
ನವೆಂಬರ್ ನಿಂದ ಡಿಸೆಂಬರ್ ವೇಳೆ ಹಲಗೆ ಹಾಕುವ ಕಾರ್ಯ ನಡೆದಿದ್ದು, ಅಮ್ಟೂರಿನ ಮೊಗರ್ನಾಡ್ ಚರ್ಚ್ ವರೆಗೂ ನೀರು ಸಂಗ್ರಹಿತವಾಗುತ್ತದೆ. 9 ಅಡಿ ಅಗಲದ ಸೇತುವೆಯಲ್ಲಿ ಸಣ್ಣಗಾತ್ರದ ವಾಹನ ಸಂಚಾರ ಮಾತ್ರ ಇಲ್ಲಿ ಸಾಧ್ಯ.
ಎಚ್ಚರ ಅಗತ್ಯ: ಕಿಂಡಿ ಅಣೆಕಟ್ಟುವಿನಲ್ಲಿ ಸಂಗ್ರಹಗೊಂಡ ನೀರು ಕೃಷಿ ಉದ್ದೇಶಕ್ಕೆ ಬಳಕೆಯಾಗುವುದಾದರೂ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದೂ ಸ್ಥಳೀಯರ ಹೊಣೆಗಾರಿಕೆಯಾಗಿದೆ. ಸರ್ಕಾರಿ ಯೋಜನೆಗಳ ಸಮರ್ಪಕ ಬಳಕೆಯ ಜವಾಬ್ದಾರಿ ಸ್ಥಳೀಯರು ಹಾಗೂ ಜನಪ್ರತಿನಿಧಿಗಳಿಗೆ ಸೇರಿದ ಕಾರಣ, ನೀರಿಗೆ ಕೊಳಚೆ, ಮಲಿನಯುಕ್ತ ಪದಾರ್ಥಗಳು ಸೇರದಂತೆ ಮಾಡುವುದು, ಡಂಪಿಂಗ್ ಪ್ರದೇಶವನ್ನಾಗಿಸದೇ, ಅಗತ್ಯ ಬಂದಾಗ ಕುಡಿಯಲೂ ಆಗುವಂತೆ ಅದನ್ನು ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ಸ್ಥಳೀಯರದ್ದು ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಶಿವಪ್ರಸನ್ನ.
ಒಂದೂವರೆ ಕಿ.ಮೀ.ವರೆಗೆ ನೀರು ನಿಂತು ನಮ್ಮ ಕೃಷಿಗೆ ಅನುಕೂಲವಾಗಿದೆ. ತೆಂಗು, ಭತ್ತ ಬೆಳೆಗಾರರಿಗೆ ಇದು ತುಂಬಾ ಉಪಯೋಗಿ. ದ್ವಿಚಕ್ರ ವಾಹನ, ಆಟೋಗಳು ಸಂಚರಿಸುವುದರಿಂದ ಮಳೆಗಾಲದಲ್ಲಿ ತುಂಬಾ ಪ್ರಯೋಜನವಾಗಿದೆ. ಇದನ್ನು ಲಾಕ್ ಡೌನ್ ಸಮಯದಲ್ಲಿ ಕಿಂಡಿ ಅಣೆಕಟ್ಟನ್ನು ಶೀಘ್ರವಾಗಿ ನಿರ್ಮಿಸಿ, ಫೈಬರ್ ಹಲಗೆ ಹಾಕಿ ನೀರಿನ ಸಮಸ್ಯೆ ನೀಗಿಸಲು ಸಹಕಾರಿಯಾಗಿದೆ ಎಂದು ಸ್ಥಳೀಯ ಕೃಷಿಕ ಜಾನ್ ಫುರ್ಟಾಡೊ ತಿಳಿಸಿದ್ದಾರೆ.
ಕಿಂಡಿ ಅಣೆಕಟ್ಟಿನಿಂದ ನೀರಿನ ಒಳಹರಿವು ಜಾಸ್ತಿಯಾಗಿದೆ. ಬೋರ್ವೆಲ್ ಬಾವಿಗಳಲ್ಲಿ ನೀರು ಸಮೃದ್ಧವಾಗಿದೆ. ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕಿದ್ದರೆ, ಎಲ್ಲ ಹಲಗೆಗಳನ್ನು ಹಾಕಬೇಕು. ಆಗ ಮತ್ತಷ್ಟು ಜಲಸಮೃದ್ಧಿಯಾಗುತ್ತದೆ ಎಂದು ಸ್ಥಳೀಯರಾದ ದೇವ್ ದಾಸ್ ಹೇಳಿದ್ದಾರೆ.