ಬಂಟ್ವಾಳ (ದಕ್ಷಿಣ ಕನ್ನಡ) : ಕೊರೊನಾ ಸೋಂಕಿನ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಕರ್ನಾಟಕ ಹಾಗೂ ಕೇರಳ ಸಂಪರ್ಕಿಸುವ ಎಲ್ಲಾ ಗಡಿ ರಸ್ತೆಗಳ ಮಧ್ಯೆ ಮಣ್ಣು ಹಾಕಿ ಕೇರಳ ಸರ್ಕಾರ ಗಡಿ ಬಂದ್ ಮಾಡಿದೆ.
ಮಂಗಳೂರು ಹಾಗೂ ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಂದ್ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಕಾಸರಗೋಡು ಜಿಲ್ಲೆಯವರು ರಾಜ್ಯ ಒಳಗೆ ಬರದಂತೆ ಸಣ್ಣ- ಸಣ್ಣ ರಸ್ತೆಗಳನ್ನೂ ಕರ್ನಾಟಕ ಬಂದ್ ಮಾಡಿತ್ತು. ಈಗ ಕೇರಳ ಆ ಕೆಲಸವನ್ನು ಮಾಡುತ್ತಿದೆ.
ಕಾಸರಗೋಡಿನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗಿದ್ದಪು, ದ.ಕ. ಜಿಲ್ಲೆಯಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಾಸರಗೋಡು ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ. ಬೆರಿಪದವು, ಪಾದೆಕಲ್ಲು, ಮುಗುಳಿ ಹಾಗೂ ಪದ್ಯಾಣ ಮೊದಲಾದ ಕಡೆಗಳಿಂದ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಗಡಿ ಭಾಗದ ಜನ ಇದೇ ರಸ್ತೆಯ ಮೂಲಕ ತಮ್ಮ ಕೆಲಸ ಕಾರ್ಯಗಳಿಗೆ ಮಂಗಳೂರು ಸಂಪರ್ಕಿಸುತ್ತಿದ್ದರು.