ಬಂಟ್ವಾಳ: ಕೊಲ್ಲೂರು ಸಹಿತ ನಾಡಿನ ವಿವಿಧ ದೇವಸ್ಥಾನಗಳಲ್ಲಿ ಈ ಹಿಂದೆ ಸಲಾಂ ಮಂಗಳಾರತಿ ಎಂಬ ಹೆಸರಿನಲ್ಲಿ ಸೇವೆಗಳು ನಡೆಯುತ್ತಿದ್ದವು. ಇದೀಗ ಅದರ ಹೆಸರು ಬದಲಾಯಿಸಲು ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾನಿಸಿದೆ ಎಂದು ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.
ಈ ಹಿಂದೆ ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭ ದೇವಸ್ಥಾನಗಳಲ್ಲಿ ತನ್ನ ಆಡಳಿತಕ್ಕೆ ಒಳ್ಳೆಯದಾಗಲೆಂದು ಸಲಾಂ ಮಂಗಳಾರತಿ ಹೆಸರಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದ. ಆ ಪದ್ಧತಿ ಹಾಗೆಯೇ ಮುಂದುವರಿಯಿತು. ಆದರೆ ಇಂದು ಕೇವಲ ರಾಜ್ಯಾಡಳಿತಕ್ಕಷ್ಟೇ ಅಲ್ಲ, ಪ್ರಜೆಗಳಿಗೂ ಒಳಿತಾಗಲೆಂದು ಹಾಗೂ ಸಲಾಂ ಎಂಬುದರ ಬದಲಾಗಿ ನಮಸ್ಕಾರ ಎಂಬ ಹೆಸರನ್ನು ಇಟ್ಟುಕೊಂಡು ಆ ಸೇವೆ ನಡೆಸಲಾಗುತ್ತದೆ ಎಂದು ಭಟ್ ಹೇಳಿದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ದೀವಟಿಗೆ, ಪಂಜು, ದೊಂದಿ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿ ನಡೆಸುವುದನ್ನು ದೀವಟಿಗೆ ಸಲಾಂ, ಸಲಾಂ ಆರತಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಸಲಾಂ ಎಂಬ ಪದವನ್ನು ತೆಗೆದು ಸಂಸ್ಕೃತ ಭಾಷೆಯ ಪದದಿಂದ ಸೇವಾ ಕಾರ್ಯಗಳನ್ನು ನಡೆಸಲು ಸೂಚಕವಾಗುವಂತೆ ಹೆಸರುಗಳನ್ನು ಸರಿಪಡಿಸಲು ಪರಿಷತ್ತಿನ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದರು. ಸೇವೆಗಳು ಹಾಗೆಯೇ ಮುಂದುವರಿಯುತ್ತವೆ ಎಂದರು.
ಇದನ್ನೂ ಓದಿ: ದೀವಟಿಗೆ ಸಲಾಂ ಆರತಿ ವಿವಾದ: ದೇವಾಲಯ ಆಡಳಿತ ಮಂಡಳಿ ವರದಿ ಕೇಳಿದ ಜಿಲ್ಲಾಡಳಿತ
ಮುಜರಾಯಿ ಎಂಬ ಶಬ್ದವೂ ನಮ್ಮದಲ್ಲ ಎಂದು ಹೇಳಿದ ಭಟ್, ಇನ್ನು ಮುಂದೆ ಧಾರ್ಮಿಕ ಸಂಸ್ಥೆಗಳು ಧರ್ಮದಾಯದತ್ತಿ ಎಂಬ ಹೆಸರಲ್ಲೇ ಇಲಾಖೆಯನ್ನು ಸಂಬೋಧಿಸಬೇಕು ಎಂಬ ತೀರ್ಮಾನವನ್ನು ರಾಜ್ಯ ಧಾರ್ಮಿಕ ಪರಿಷತ್ತು ಕೈಗೊಂಡಿದೆ ಎಂದು ಹೇಳಿದರು.