ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಸಂಚಾರಕ್ಕೆ ಹೇರಲಾಗಿದ್ದ ನಿಷೇಧವನ್ನು ಜಿಲ್ಲಾಧಿಕಾರಿ ವಾಪಾಸ್ ಪಡೆದು ಆದೇಶಿಸಿದ್ದಾರೆ.
ಆರೋಗ್ಯ, ಶೈಕ್ಷಣಿಕ ಮತ್ತು ವ್ಯಾಪಾರ ಚಟುವಟಿಕೆಗಳ ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಜನರು ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವಿನ ಬಸ್ ಸಂಚಾರವನ್ನು ಅವಲಂಬಿಸಿದ್ದರು. ಆದರೆ, ಈ ಹಿಂದೆ ಕೇರಳದಲ್ಲಿ ಕೊರೊನಾ ಹೆಚ್ಚಳವಾಗಿದ್ದ ಹಿನ್ನೆಲೆ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಇದೀಗ ಕೊರೊನಾ ಪ್ರಕರಣ ಇಳಿಮುಖವಾಗಿದ್ದರೂ ಬಸ್ ಸಂಚಾರ ಆರಂಭವಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರು ಗಡಿ ಭಾಗವಾದ ತಲಪಾಡಿಯವರೆಗೆ ಕೇರಳ ರಾಜ್ಯದ ಬಸ್ನಲ್ಲಿ ಬಂದು ಅಲ್ಲಿಂದ ಕರ್ನಾಟಕದ ಬಸ್ನಲ್ಲಿ ಮಂಗಳೂರಿಗೆ ಬರುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು.
ಹೀಗಾಗಿ, ಈ ಹಿಂದೆ ಹಾಕಲಾಗಿದ್ದ ನಿರ್ಬಂಧವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತೆರವುಗೊಳಿಸಿದ್ದಾರೆ. ಜೊತೆಗೆ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ.
ಕೇರಳದಿಂದ ರಾಜ್ಯಕ್ಕೆ ಪ್ರಯಾಣಿಸುವವರು 72 ಗಂಟೆಗಳ ಒಳಗೆ ಮಾಡಿಸಿದ ಮತ್ತು ಉದ್ಯೋಗ, ಶಿಕ್ಷಣ ಸೇರಿದಂತೆ ದಿನಂಪ್ರತಿ ಮಂಗಳೂರಿಗೆ ಬರುವವರು 7 ದಿನಗಳ ಒಳಗಿನ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಜೊತೆಗೆ ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ ಪರ ಮಾತನಾಡುವ ದಿನ ಬರುತ್ತೆ: ಸಿ.ಟಿ.ರವಿ