ಮಂಗಳೂರು: ಮನೆ ಒಂದು ರಾಜ್ಯದಲ್ಲಿ, ಕೆಲಸ ಇನ್ನೊಂದು ರಾಜ್ಯದಲ್ಲಿ ಎನ್ನುವಂತಿರುವ, ಕೇರಳದ ಗಡಿ ಜಿಲ್ಲೆ ಕಾಸರಗೋಡಿಗೆ ಹೊಂದಿಕೊಂಡಿರುವ ಬಂಟ್ವಾಳ ತಾಲೂಕಿನ ಜನರ ಮೇಲೆ ಕೊರೊನಾ ವೈರಸ್ ವ್ಯತಿರಿಕ್ತ ಪರಿಣಾಮ ಬೀರಿದೆ.
ಕೊರೊನೊ ವೈರಸ್ ತಡೆಯುವ ನಿಟ್ಟಿನಲ್ಲಿ, ಕೇರಳದ ಕಾಸರಗೋಡು ಜಿಲ್ಲೆಗೆ ಬಂಟ್ವಾಳ ತಾಲೂಕಿನಿಂದ ಪ್ರವೇಶ ನಿಷೇಧಿಸಲಾಗಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ಗಡಿ ಭಾಗದಲ್ಲಿ ಪೊಲೀಸ್ ಇಲಾಖೆ ಇಲಾಖೆ ನಾಕಾಬಂದಿ ಹಾಕಿ, ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿದೆ. ವೈರಸ್ ಹರಡುವುದನ್ನು ತಡೆಯಲು ಇದು ಸಹಕಾರಿಯಾಗಿದೆಯಾದರೂ ಮನೆ ಒಂದು ರಾಜ್ಯದಲ್ಲಿ, ಕೆಲಸ ಇನ್ನೊಂದು ರಾಜ್ಯದಲ್ಲಿ ಎಂದು ಜೀವಿಸುವ ನೂರಾರು ಮಂದಿ ಸ್ಥಳೀಯರು ಪರದಾಡುವಂತಾಗಿದೆ.
ಶನಿವಾರ ಬೆಳಗ್ಗೆಯೇ ಪೊಲೀಸರು, ಮಧ್ಯಾಹ್ನ 2 ಗಂಟೆ ಬಳಿಕ ವಾಹನ ಸಂಚಾರ ನಿಷೇಧಿಸಲಾಗುತ್ತದೆ ಎಂದು ಸೂಚನೆ ನೀಡಿದ್ದರು, ಅದರಂತೆ 2 ಗಂಟೆಯಿಂದ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದ ಹಲವು ಮಂದಿ ಆಗಮಿಸಿ ಚೆಕ್ ಪೋಸ್ಟ್ ಗಳಲ್ಲಿ ಕಾಯುವಂತಾಯಿತು. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವದಕ್ಕೆ ಇಳಿದಿದ್ದಾರೆ. ಬೇರೆ ಬೇರೆ ಕಡೆ ತೆರಳುವ ಪ್ರಯಾಣಿಕರು ಹಾಗೂ ಸರಕು ಸಾಗಾಟದ ವಾಹನಗಳು ಅರ್ಧ ದಾರಿಯಲ್ಲಿ ನಿಲ್ಲುವಂತಾಯಿತು.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಆಗಮಿಸಿ ಚೆಕ್ ಪೋಸ್ಟ್ ಗಳ ಪರಿಶೀಲನೆ ನಡೆಸಿದರು.