ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತ ಕೃಷ್ಣ (71) ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1946ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸಿದ ಅನಂತ ಕೃಷ್ಣ ಅವರು, ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿ ಪಡೆದಿದ್ದರು. ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಬಳಿಕ ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸೇರಿದ ಅವರು 1971ರಲ್ಲಿ ಕರ್ಣಾಟಕ ಬ್ಯಾಂಕ್ ಸೇರಿದ್ದರು. ಬ್ಯಾಂಕ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿ, 1994ರಲ್ಲಿ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ್ದರು. 1998ರಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ 2000 ಇಸವಿಯಲ್ಲಿ ಸಿಇಒ ಮತ್ತು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅನಂತ ಕೃಷ್ಣ ಅವರ ಕಾಲದಲ್ಲಿ ಕರ್ಣಾಟಕ ಬ್ಯಾಂಕ್ ಬಹಳಷ್ಟು ಬ್ರ್ಯಾಂಚ್ ಗಳನ್ನು ಹೊಂದಿತ್ತು. ಅಲ್ಲದೆ ಕರ್ಣಾಟಕ ಬ್ಯಾಂಕ್ ಅನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದ್ದರು. ಆದ್ದರಿಂದ ಕರ್ಣಾಟಕ ಬ್ಯಾಂಕ್, ಭಾರತದ ಪ್ರಥಮ ಡಿಜಿಟಲೀಕರಣವಾದ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿತ್ತು. ಜೊತೆಗೆ ಅನಂತ ಕೃಷ್ಣ ಅವರು ಕಲೆ ಬಗ್ಗೆಯೂ ಆಸಕ್ತಿ ಹೊಂದಿದ್ದು, ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡಿದ್ದರು.