ಮಂಗಳೂರು: ಕಂಬಳ ಓಟದಲ್ಲಿ ದಾಖಲೆ ಸೃಷ್ಟಿಸಿದ ಶ್ರೀನಿವಾಸ ಗೌಡರು ಮಾಡೆಲಿಂಗ್ ರಂಗ ಪ್ರವೇಶಿಸಿದ್ದಾರೆ. ಜ್ಯುವೆಲ್ಲರಿ ಸಂಸ್ಥೆಯೊಂದರ ಮಾಡೆಲ್ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅವರು, ಕಂಬಳ ಕೋಣದ ಜೊತೆಗೆ ಆಭರಣಗಳ ವಿಶೇಷ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದಾರೆ. ಕಡಲ ನಗರದಲ್ಲೀಗ ಅವರ ಜಾಹೀರಾತು ಫ್ಲೆಕ್ಸ್ಗಳು ಕಾಣಿಸುತ್ತಿವೆ.
ಶ್ರೀನಿವಾಸ ಗೌಡ ಅವರ ಕೈ ಬೆರಳುಗಳ ತುಂಬ ವೈವಿಧ್ಯಮಯ ಉಂಗುರಗಳು, ಕೈಯಲ್ಲಿ ಬಂಗಾರದ ಕಡಗ, ಬ್ರಾಸ್ಲೈಟ್, ಪೆಂಡೆಂಟ್‌ಸಹಿತ ಚಿನ್ನದ ಹಾರ ಹಾಕಿ, ಶಕ್ತಿ ಪ್ರಸಾದ್ ಶೆಟ್ಟಿ ಎಂಬುವವರ ಕಂಬಳದ ಕೋಣ "ಅಪ್ಪು" ಜೊತೆಗೆ ಫೋಟೋ ತೆಗೆಯಲಾಗಿದೆ. ಪುರುಷರೂ ಈ ರೀತಿ ಬಂಗಾರದ ಆಭರಣಗಳೊಂದಿಗೆ ಅಲಂಕಾರ ಮಾಡಬಹುದೆಂಬ ಮಾದರಿಯಾಗಿ ಜಾಹೀರಾತು ಮಾಡಲಾಗಿದೆ.
ಶ್ರೀನಿವಾಸ ಗೌಡ ಅವರು ಬಾಹುಬಲಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿರ್ದ್ದ ಕಂಬಳ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಜ್ಯುವೆಲ್ಲರಿಯ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿರುವ ಶ್ರೀನಿವಾಸ ಗೌಡ, 'ಫೋಟೋ ಶೂಟ್ ಮಾಡುವಾಗ ಈ ಸಂಸ್ಥೆ ಜಾಹೀರಾತಿಗೆ ಎಂದು ತಿಳಿದಿರಲಿಲ್ಲ. ಜಾಹೀರಾತುಗಳ ದೊಡ್ಡ ಫ್ಲೆಕ್ಸ್ಗಳನ್ನು ನೋಡಿ ಕೋಣಗಳ ಯಜಮಾನರಿಗೂ, ಕಂಬಳ ಅಭಿಮಾನಿಗಳಿಗೂ ಖುಷಿಯಾಗಿದೆ. ಕಂಬಳದ ಕೋಣಗಳಿಗೂ ದೊಡ್ಡ ಸಂಸ್ಥೆ ಜಾಹೀರಾತಿಗೆ ಅವಕಾಶ ಕೊಟ್ಟಿರುವುದು ಖುಷಿ ತಂದಿದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕಂಬಳದಲ್ಲಿ ದಾಖಲೆ ವೀರ ಶ್ರೀನಿವಾಸ ಗೌಡ: 2020ರಲ್ಲಿ ನಡೆದ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್ನಲ್ಲಿ ಕ್ರಮಿಸುವ ಮೂಲಕ 2009ರಲ್ಲಿ ಉಸೇನ್ ಬೋಲ್ಟ್ ಅವರ 9.58 ಸೆಕೆಂಡ್ನಲ್ಲಿ 100 ಮೀಟರ್ ಕ್ರಮಿಸಿದ ದಾಖಲೆಯನ್ನು ಮೀರಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡರನ್ನು ರಾಜ್ಯ ಸರ್ಕಾರ ಸೇರಿದಂತೆ ದೇಶದ ಹಲವು ಸಂಸ್ಥೆಗಳು ಗೌರವಿಸಿದ್ದವು.
ಇದನ್ನೂ ಓದಿ: ರಿಷಭ್ ಪಂತ್ ತಾಯಿಯೊಂದಿಗೆ ಪ್ರಧಾನಿ ಮೋದಿ ಮಾತು, ಆರೋಗ್ಯ ವಿಚಾರಣೆ