ಮಂಗಳೂರು (ದ.ಕ) : ಕರಾವಳಿ ಕಂಬಳ ಎಂದಾಕ್ಷಣವೇ ಕೆಸರು ಗದ್ದೆಯಲ್ಲಿ ಜೋಡಿ ಕೋಣಗಳು ಭೂಮಿ ಸೀಳುವ ವೇಗದಲ್ಲಿ ಮುನ್ನುಗ್ಗುವ ದೃಶ್ಯ ರೋಚಕ. ಈ ಜೋಡಿ ಕೋಣಗಳ ಹಿಂದೊಬ್ಬ ಶರವೇಗದಲ್ಲಿ ಗುರಿಮುಟ್ಟುವ ತವಕದ ಉತ್ಸಾಹಿ ತರುಣ ಇರ್ತಾನೆ.
ಉಳುಮೆ ಮಾಡುವ ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಪುರಾತನ ಸಂಪ್ರದಾಯವೇ ಕರುನಾಡಿನ ಕರಾವಳಿಯ ಕಂಬಳ. ತುಳುನಾಡು ಎಂದೇ ಕರೆಯುವ ಕರಾವಳಿಯಲ್ಲಿ ರೈತಾಪಿ ವರ್ಗ ಎರಡನೇ ಬೆಳೆ ಸುಗ್ಗಿಯ ಬಳಿಕ ಕೆಸರು ಮಣ್ಣಿನಿಂದ ಕೂಡಿದ ವಿಶಾಲವಾದ ಗದ್ದೆಗಳಲ್ಲಿ ತಮ್ಮ ಕೋಣಗಳನ್ನು ಓಡಿಸುತ್ತಾರೆ. ಇದು ಅತೀ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರೋ ಪದ್ಧತಿ.
1970ರ ಬಳಿಕ ಈ ಸಾಂಪ್ರದಾಯಿಕ ಪದ್ಧತಿ ಕ್ರೀಡಾರೂಪ ತಳೆಯಿತು. ಆಧುನಿಕ ಕಂಬಳ, ಹೊಸ ತಂತ್ರಗಾರಿಕೆ, ಹೊಸಬರ ಪ್ರವೇಶ, ಕಂಬಳದ ಕಡೆ ಯುವ ಸಮುದಾಯ ನಿಧಾನವಾಗಿ ಆಕರ್ಷಿಸಿತು. ಬರುಬರುತ್ತಾ ಈ ಕಂಬಳ ಸಂಭ್ರಮೋಲ್ಲಾಸದ ಕ್ರೀಡಾ ಹಬ್ಬವಾಗಿಯೇ ಮಾರ್ಪಟ್ಟಿತು. ಆಧುನಿಕ ಕಂಬಳದಲ್ಲಿ ಕನೆ ಹಲಗೆ, ಹಗ್ಗ ಹಿರಿಯ, ಅಡ್ಡ ಹಲಗೆ, ನೇಗಿಲು ಹಾಗೂ ಕಿರಿಯ ವಿಭಾಗಗಳೆಂಬ ಹೊಸ ಮಾರ್ಪಾಡುಗಳು ಹುಟ್ಟಿಕೊಂಡವು.
ಜೊತೆಗೆ ಕಂಬಳದಲ್ಲಿ ಭಾಗಿಯಾಗಲೆಂದೇ ಕೋಣಗಳ ಆರೈಕೆಗೆ ನಿಂತರು. ಕಂಬಳವು ಆಧುನಿಕ ಸ್ಪರ್ಶ ಪಡೆದುಕೊಂಡಂತೆ ಕೋಣಗಳಿಗೂ ಅತ್ಯುತ್ತಮ ಆರೈಕೆಯ ಸ್ಪರ್ಶ ನೀಡಲಾಯಿತು. ಇದಕ್ಕಾಗಿ ಕೋಣಗಳ ದೇಹ ಹುರಿಗೊಳಿಸಲಾಯಿತು. ಈ ಕೋಣಗಳಿಗೆ ರಾಜಾತಿಥ್ಯ ನೀಡಿ ಮನೆ ಮಕ್ಕಳಂತೆ ಸಾಕಿ ಸಲುಹುತ್ತಾರೆ. ಹೀಗೆ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಕೋಣಗಳು ಮುಂದೆ ಕಂಬಳ ಗದ್ದೆಯಲ್ಲಿ ಕಣ್ಣರಳಿಸಿ ನೋಡುವಷ್ಟರಲ್ಲಿ ಗುರಿ ಮುಟ್ಟಿರುತ್ತವೆ.
ಕಂಬಳಕ್ಕೆ ಮೆರುಗು ಹೆಚ್ಚಿಸಿದ ಶ್ರೀನಿವಾಸ್ : ಇಂತಹ ರೋಮಾಂಚಕ ಕ್ರೀಡೆಗೆ ಇತ್ತೀಚೆಗೆ ಇನ್ನಷ್ಟು ಮೆರುಗು ನೀಡಿದ್ದು ದಾಖಲೆ ವೀರ ಶ್ರೀನಿವಾಸ್ ಗೌಡ. ಇವರು ಒಮ್ಮೆ ಕಂಬಳ ಗದ್ದೆಗಿಳಿದರೆ ಸಾಕು, ಇವರ ಹೆಸರಲ್ಲಿ ಹೊಸ ದಾಖಲೆ ಬರೆದಂತೆಯೇ ಅನ್ನುವಷ್ಟರ ಮಟ್ಟಿಗೆ ನಿರೀಕ್ಷೆ ಹುಟ್ಟಿಸುತ್ತಿದ್ದಾರೆ. ಇವರು ಕಂಬಳ ಗದ್ದೆಗಿಳಿದು ಕೋಣ ಕಟ್ಟಿದ್ದೇ ಕುತೂಹಲಕಾರಿ ಕಥೆ.
ಬಾಲ್ಯದಿಂದ ಕೋಣಗಳ ಜೊತೆ ಒಡನಾಟ ಹೊಂದಿದ್ದ ಶ್ರೀನಿವಾಸ್ ಮುಂದೊಂದಿನ ಕೋಣ ಕಟ್ಟುವ ಆಸೆ ಕಟ್ಟಿಕೊಂಡಿದ್ದರಂತೆ. 7ನೇ ತರಗತಿಯಿಂದಲೇ ಕಂಬಳದ ಕ್ರೇಜ್ ಹಚ್ಚಿಸಿಕೊಂಡ ಇವರು, ಬಾಲ್ಯದಲ್ಲೇ ಕೋಣಗಳ ಆರೈಕೆಯಲ್ಲಿ ತೊಡಗಿದ್ದಾರೆ. ಜೊತೆ ಜೊತೆಗೆ ಕಂಬಳ ನಡೆಯುತ್ತಿದ್ದ ಜಾಗಕ್ಕೂ ತೆರಳಿ ಸಂಭ್ರಮಿಸುತ್ತಿದ್ದರಂತೆ.
ಕೋಣ ಕಟ್ಟಿ ನಿಂತರೇ ದಾಖಲೆ ವೀರ? : ಕಳೆದ 8 ವರ್ಷಗಳಿಂದ ಕಂಬಳ ಓಟಗಾರನಾಗಿ ಶ್ರೀನಿವಾಸ್ ಗೌಡ ಗುರುತಿಸಿಕೊಂಡರೂ, 2020 ಫೆಬ್ರವರಿ 1ರಂದು ಮಂಗಳೂರಿನ ಐಕಳಬಾವ ಕಾಂತಬಾರೆ-ಬೂದಬಾರೆ ಜೋಡುಕರೆ ಕಂಬಳದಲ್ಲಿ ಮಾಡಿರುವ ಸಾರ್ವಕಾಲಿಕ ದಾಖಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತು.
ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕಂಬಳದ ಕೆರೆಯನ್ನು ಇವರು ಕೇವಲ 13.46 ಸೆಕೆಂಡ್ಗಳಲ್ಲಿ ಮುಟ್ಟಿ ದಾಖಲೆ ಬರೆದರು. ಇದೀಗ ತಮ್ಮದೇ ದಾಖಲೆ ಮುರಿದು ಹೊಸ ದಾಖಲೆ ಕಟ್ಟಿದ್ದಾರೆ. ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳೋತ್ಸವದಲ್ಲಿ 8.89 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ಮುಟ್ಟಿದ್ದರೆ, ಮಾರ್ಚ್ 28ರಂದು ಬಂಟ್ವಾಳದ ಕಕ್ಯಪದವು ಸತ್ಯ-ಧರ್ಮ ಜೋಡುಕೆರೆಯ ಕಂಬಳದಲ್ಲಿ 100 ಮೀಟರ್ ಗುರಿಯನ್ನು ಕೇವಲ 8.78 ಸೆಕೆಂಡ್ಗಳಲ್ಲಿ ತಲುಪಿ ಗಮನ ಸೆಳೆದಿದ್ದರು.
ಕಿರಣ್ ರಿಜಿಜು ಮನಗೆದ್ದ ಶ್ರೀನಿವಾಸ್ : ಮೊಟ್ಟ ಮೊದಲ ಬಾರಿಗೆ ಕಂಬಳ ಅಕಾಡೆಮಿಯಲ್ಲಿ ಸೇರಿಕೊಂಡ ಈ ಯುವಕ ನಿರಂತರ ತರಬೇತಿ ಪಡೆದು ಭರವಸೆಯ ಕಂಬಳ ಪಟು ಎನಿಸಿದ್ದರು. ಬಳಿಕ ಕಂಬಳ ಗದ್ದೆಯಲ್ಲಿ ಪಾರುಪತ್ಯ ಮೆರೆದಾಗ ದಾಖಲೆಗಳ ಮೇಲೆ ದಾಖಲೆ ಬರೆಯೋಕೆ ಶುರು ಮಾಡಿದರು. ಮೊಟ್ಟ ಮೊದಲ ಬಾರಿಗೆ ಕ್ರೀಡಾ ಸಚಿವ ಕಿರನ್ ರಿಜಿಜು ಇವರ ಓಟಕ್ಕೆ ಮಾರು ಹೋಗಿದ್ದರು.
ಶ್ರೀನಿವಾಸ ಗೌಡರ ಸಾಧನೆ ಕಂಡು ಮಹಿಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಇಂತಹ ಪ್ರತಿಭೆಗೆ ಕ್ರೀಡಾಂಗಣದಲ್ಲೂ ಅವಕಾಶ ನೀಡಬೇಕು ಎಂದು ಸರ್ಕಾರಗಳಿಗೆ ಸಲಹೆ ಕೊಟ್ಟಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರನ್ ರಿಜಿಜು ತರಬೇತಿ ನೀಡುವುದಾಗಿಯೂ ಭರವಸೆ ನೀಡಿದ್ದರು. ಗ್ರಾಮೀಣ ಕ್ರೀಡೆ ಕಂಬಳ ಈಗ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದೆ. ಈ ಜಾನಪದ ಕ್ರೀಡೆಯ ಮೇಲೆ ಯುವ ಸಮುದಾಯ ಹೆಚ್ಚೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದು, ಅಕಾಡೆಮಿಗಳ ಮೂಲಕ ಕಂಬಳ ಗದ್ದೆಯಲ್ಲಿ ಇನ್ನಷ್ಟು ಸಾಧಿಸುವ ಹಂಬಲ ತೋರಿಸುತ್ತಿದ್ದಾರೆ.
ಸಿಕ್ಸ್ ಪ್ಯಾಕ್ಸ್ ಬೆಳೆಸಿಕೊಂಡ ಶ್ರೀನಿವಾಸ : ಶ್ರೀನಿವಾಸ ಗೌಡರ ಹುರಿಗಟ್ಟಿರುವ ಮೈಕಟ್ಟನ್ನು ನೋಡುವಾಗ ಜಿಮ್ನಲ್ಲಿ ಮೈದಂಡಿಸಿದವರಂತೆ ಕಂಡರೂ, ಯಾವತ್ತೂ ಅವರು ಜಿಮ್ಗೆ ತೆರಳಿದವರೇ ಅಲ್ಲವಂತೆ. ಗಾರೆ ಕೆಲಸಕ್ಕೆ ಮೇಸ್ತ್ರಿಯಾಗಿ ಸಾಕಷ್ಟು ಕಲ್ಲುಗಳನ್ನು ಎತ್ತವುದು, ಕೃಷಿಕಾರ್ಯದಲ್ಲಿ ತೊಡುವುದು, ತೆಂಗಿನ, ಅಡಿಕೆ ಮರಗಳನ್ನು ಹತ್ತುವುದು, ಅಡಿಕೆ ಸುಲಿಯುವುದು, ಕೋಣಗಳಿಗೆ ಕಂಬಳ ಓಟದ ತರಬೇತಿ ನೀಡುವುದು ಮುಂತಾದ ಕಾರ್ಯಗಳ ಮೂಲಕ ದಿನವೂ ದೇಹ ದಂಡಿಸಿರುವುದರಿಂದ ಈ ಸಿಕ್ಸ್ ಪ್ಯಾಕ್ಸ್ ಬೆಳೆದಿದೆ ಎಂದು ಹೇಳಿ ನಗುತ್ತಾರೆ ಶ್ರೀನಿವಾಸ ಗೌಡ.
ಕಂಬಳ ಅಕಾಡೆಮಿ ಸಂಸ್ಥೆಯಿಂದ ತರಬೇತಿ ಪಡೆದ ಮೊದಲ ಬ್ಯಾಚ್ ವಿದ್ಯಾರ್ಥಿ : ಮಿಜಾರ್ ಅಶ್ವತ್ಥಪುರ ಶ್ರೀನಿವಾಸಗೌಡ ಅವರು ಕಂಬಳ ಅಕಾಡೆಮಿ ಸಂಸ್ಥೆಯಿಂದ 2011ರಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಕಂಬಳ ಓಟಗಾರ ತರಬೇತಿ ಪಡೆದ ಮೊದಲ ಬ್ಯಾಚಿನ ವಿದ್ಯಾರ್ಥಿ. ಅದೇ ವರ್ಷ ತಮ್ಮ 22ನೇ ವಯಸ್ಸಿಗೆ ಮೊದಲ ಬಾರಿಗೆ ಕಂಬಳ ಓಟಗಾರರಾಗಿ ಕಂಬಳದ ಕರೆಗೆ ಇಳಿದ ಶ್ರೀನಿವಾಸ ಗೌಡ ಅವರು ನಂದಳಿಕೆ ಶ್ರೀಕಾಂತ್ ಭಟ್ ಕೋಣಗಳನ್ನು ಹಗ್ಗ ಕಿರಿಯ ವಿಭಾಗದಲ್ಲಿ ಓಡಿಸಿ ಮೆಡಲ್ ಪಡೆದಿದ್ದರಂತೆ. ಅವರ ಈ ಸಾಧನೆ ಕಂಬಳ ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿಯಲ್ಲ.
ಕಂಬಳದ ಉಸೇನ್ ಬೋಲ್ಟ್ಗೆ ಅಭಿಮಾನಿಗಳ ದಂಡು : ಕಳೆದ ವರ್ಷ ಐಕಳಬಾವಾ ಕಂಬಳದಲ್ಲಿ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ ಬಳಿಕ ಶ್ರೀನಿವಾಸ ಗೌಡರಿಗೆ ಸ್ಟಾರ್ ವ್ಯಾಲ್ಯೂ ದೊರಕಿದ್ದು, ಫ್ಯಾನ್ಸ್ಗಳು ಹುಟ್ಟಿಕೊಟ್ಟಿದಲ್ಲದೆ ಎಲ್ಲೇ ಹೋದರು ಫೋಟೋಗಾಗಿ ಮುಗಿಬೀಳುತ್ತಾರೆ. ಅಲ್ಲದೆ ಫೇಸ್ಬುಕ್, ಇನ್ಸ್ಸ್ಟಾಗ್ರಾಮ್ನಲ್ಲಿ ಕಂಬಳ ಶ್ರೀನಿವಾಸ ಗೌಡರ ಅಭಿಮಾನಿಗಳು ಎಂಬ ಖಾತೆ ಓಪನ್ ಮಾಡಿ ಅವರ ಫೋಟೋಗಳನ್ನು, ವೀಡಿಯೋಗಳನ್ನು ಶೇರ್ ಮಾಡಲಾಗುತ್ತದೆ. ಸಾಕಷ್ಟು ಜನ ಅಭಿಮಾನಿಗಳು ಈ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ.
‘ತರಬೇತಿ ಪಡೆದವರೆಲ್ಲಾ ಕಂಬಳ ಓಟಗಾರರಾಗಲು ಸಾಧ್ಯವಿಲ್ಲ’ : ಇತ್ತ ಕಂಬಳ ಓಟಗಾರರಾಗಲು ಬರೀ ತರಬೇತಿಯೊಂದೇ ಸಾಲುವುದಿಲ್ಲ. ಕಂಬಳ ಓಟಗಾರನಿಗೆ ಮೊದಲಾಗಿ ಕೋಣಗಳೊಂದಿಗೆ ಒಡನಾಟ ಇರಬೇಕು. ಗದ್ದೆಗೆ ಇಳಿದು, ಉಳುಮೆ ಮಾಡಿ ಅನುಭವವಿರಬೇಕು. ಕಂಬಳದ ಕೋಣಗಳನ್ನು ಓಡಿಸೋದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕೆ ದೇಹ ಸುದೃಢತೆಯೂ, ಕೋಣಗಳನ್ನು ಓಡಿಸುವ ತಂತ್ರಗಾರಿಕೆಯೂ ಅಷ್ಟೇ ಅಗತ್ಯ ಎಂದು ಶ್ರೀನಿವಾಸ ಗೌಡ ಹೇಳುತ್ತಾರೆ.