ಸುಬ್ರಹ್ಮಣ್ಯ: ತಿಳಿವಳಿಕೆ, ಸತತ ಅಧ್ಯಯನ, ವಿಷಯಗಳ ವಿಚಾರಾಧಾರಿತ ಸಂಗ್ರಹ ಸಾಹಿತ್ಯಕ್ಕೆ ಅವಶ್ಯಕ ಎಂದು ಸುಬ್ರಹ್ಮಣ್ಯ ಎಸ್‍ಎಸ್‍ಪಿಯು ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಎನ್.ಕೇಶವ ಭಟ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ್ ಸಭಾ ಭವನದ ದಿ. ಪಟೇಲ್ ಕೂಜುಗೋಡು ನಾಗಪ್ಪಗೌಡ ವೇದಿಕೆಯಲ್ಲಿ ನಡೆದ ಕಡಬ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕನ್ನಡ ಭಾಷೆಯು ಸಾಹಿತ್ಯದಿಂದ ಕೂಡಿದೆ. ಆಂಗ್ಲರ ಆಳ್ವಿಕೆಯಿಂದ ಕನ್ನಡದಲ್ಲಿ ಮುಸಲ್ಮಾನರ ಹಾಗೂ ಇಂಗ್ಲಿಷ್ ಭಾಷೆಯ ಪದಗಳು ಸೇರಿದವು. ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಆಧುನಿಕ ಶಿಕ್ಷಣ ಪದ್ಧತಿ ಜಾರಿಗೆ ಬಂದಿತು. ಇಂಗ್ಲಿಷ್ ಗೀತೆಗಳು ಕನ್ನಡಕ್ಕೆ ಭಾಷಾಂತರಗೊಂಡವು ಎಂದು ಅವರು ಇಂಗ್ಲಿಷ್ ಭಾಷೆ ಕರ್ನಾಟಕದಲ್ಲಿ ನೆಲೆಗೊಂಡ ಬಗ್ಗೆ ವಿವರಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಮಾತನಾಡಿ, ಒಳ್ಳೆಯ ವಿಚಾರಗಳು ಎಲ್ಲ ಕಡೆಗಳಿಂದ ಬರಲಿ. ಅದು ಎಲ್ಲರಿಗೂ ಉಪಯುಕ್ತ. ಇದು ಸಾಹಿತ್ಯ ಸಮ್ಮೇಳನಗಳಲ್ಲಿ ದೊರೆಯುತ್ತದೆ. ಸಾಹಿತ್ಯವು ಎಲ್ಲ ಮೌಲ್ಯಗಳ ತಾಯಿ. ಮಲ್ಟಿ ಮೀಡಿಯಾಗಳಿಂದ ಪುಸ್ತಕ ಯಾವತ್ತೂ ಶ್ರೇಷ್ಠ ಎಂದಾಗುವುದೋ ಅಂದು ಸಾಹಿತ್ಯ ಸಮ್ಮೇಳನದ ಅಗತ್ಯತೆ ನಮಗೆ ಅರಿವಾಗುತ್ತದೆ ಎಂದರು.
ಕಡಬ ತಾ.ಪಂ. ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್‍ಕುಮಾರ್ ಭಂಡಾರಿ ಅವರು ಸಮ್ಮೇಳದ ಸ್ಮರಣ ಸಂಚಿಕೆ ಹಾಗೂ ನಾಡು ನುಡಿ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ಈ ವೇಳೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಡಾ.ನಿಂಗಯ್ಯ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ.ಉಪಾಧ್ಯಕ್ಷೆ ಸವಿತಾ ಭಟ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಟಿ. ರಾಮಕುಂಜ, ಎಸ್‍ಎಸ್‍ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ಯಶವಂತ ರೈ, ಕಡಬ ತಾಲೂಕು ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸತೀಶ್ ನಾಯಕ್ ಕಡಬ, ವಿಶ್ವನಾಥ ರೈ ಪೆರ್ಲ, ಸದಸ್ಯರಾದ ಮಾಯಿಲಪ್ಪ ಜಿ, ಗ್ರೇಸಿ ಪಿಂಟೋ, ಉದಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.