ಮಂಗಳೂರು: ಶಿವರಾತ್ರಿ ಪ್ರಯುಕ್ತ ನಗರದ ಬಂದರ್ ಸಮೀಪ ಇರುವ ನೀರೇಶ್ವಾಲ್ಯದ ಶ್ರೀ ಪರಮೇಶ್ವರ ದೇವಸ್ಥಾನದ (ನಿತ್ಯಾನಂದ ಆಶ್ರಮ) ದೇವರ ಉತ್ಸವ ಸಂದರ್ಭ ಕಂದಕ್ ಬಳಿ ಮುಸ್ಲಿಂ ಬಾಂಧವರು ಜ್ಯೂಸ್ ಹಂಚಿ ಸೌಹಾರ್ದತೆ ಮೆರೆದರು.
ರಾತ್ರಿ ಏಳೂವರೆ ಹೊತ್ತಿಗೆ ದೇವರ ಉತ್ಸವ ಹೊರಟಿದ್ದು, ಈ ಸಂದರ್ಭ ಮುಸ್ಲಿಂ ಬಾಂಧವರು, ದೇವರ ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಕಂದಕ್ನ ಮನಪಾ ಸದಸ್ಯ ಸುಹೈಲ್ ಕಂದಕ್ ನೇತೃತ್ವದಲ್ಲಿ ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ಜ್ಯೂಸ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಸುಹೈಲ್ ಕಂದಕ್ ಮಾತನಾಡಿ, ಶಿವರಾತ್ರಿ ಸಂದರ್ಭ ಇಂದು ನಮ್ಮ ವಾರ್ಡ್ನ ಪರಮೇಶ್ವರ ದೇವಳದ ರಥೋತ್ಸವದ ಹಿನ್ನೆಲೆಯಲ್ಲಿ ಕಂದಕ್ ಮುಸ್ಲಿಂ ಜಮಾಅತ್ನಿಂದ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಎಲ್ಲರೂ ಜಾತಿ, ಮತ ಮರೆತು ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಹಲವಾರು ವರ್ಷಗಳಿಂದ ಈ ಕಾರ್ಯವನ್ನು ನಾವು ಇಲ್ಲಿ ಮಾಡುತ್ತಿದ್ದೇವೆ. ಭಾರತೀಯರಾದ ನಾವು ಪ್ರತೀಯೊಂದು ಗಲ್ಲಿಯಲ್ಲೂ ಪ್ರೀತಿ, ಸಹೋದರತೆಯಿಂದ ಬಾಳಬೇಕೆಂಬುದು ಎಲ್ಲರಿಗೂ ನಮ್ಮ ಸಂದೇಶವಾಗಿದೆ ಎಂದು ಹೇಳಿದರು.