ಮಂಗಳೂರು: ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖಂಡಿತಾ ಗೆಲ್ಲಿಸುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 'ಮಂಗಳೂರು ದಸರಾ' ಕಾರ್ಯಕ್ರಮದ ವೇಳೆ ದೀಪ ಬೆಳಗಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಪ್ರಯತ್ನ ಬಿಡುವುದಿಲ್ಲ. ಆದ್ದರಿಂದ ಯಾವ ಭಯವೂ ನಮಗಿಲ್ಲ. ಉಪಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವ ಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದೆ. ಅವರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಪಕ್ಷ ಗೆಲ್ಲಲು ಸಾಕಷ್ಟು ಖರ್ಚು ಕೂಡಾ ಮಾಡುತ್ತಾರೆ. ಖರ್ಚು ಮಾಡುವಷ್ಟು ಹಣವೂ ಅವರಲ್ಲಿದೆ ಎಂದರು.
ಮತ್ತೊಂದು ವಿಶೇಷವೆಂದರೆ ಅವರ ತಾಯಿ ಬಹಳ ಗಟ್ಟಿಗರಾಗಿದ್ದು, ಡಿ.ಕೆ. ಶಿವಕುಮಾರ್ ಹಾಗೂ ಅವರ ತಮ್ಮ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸದೆ ಬಿಡುವುದಿಲ್ಲ. ಅವರೇ ನಿಂತು ಗೆಲ್ಲಿಸುತ್ತಾರೆ. ಆ ಧೈರ್ಯ ನನಗಿದೆ ಎಂದರು.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಕಾಂಕ್ಷೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಸ್ಪರ್ಧೆ ಯಾರಾಗಲಿದ್ದಾರೆ ಎಂಬ ಪಕ್ಷದ ಅಭಿಪ್ರಾಯಕ್ಕೆ ಉತ್ತರಿಸಿದ ಜನಾರ್ದನ ಪೂಜಾರಿ ಅವರು, ಸಿದ್ದರಾಮಯ್ಯ ಅವರು ಎಷ್ಟೇ ಪ್ರಯತ್ನಿಸಿದರೂ ಡಿ.ಕೆ.ಶಿವಕುಮಾರ್ ಅವರೇ ಗೆಲ್ಲುವುದು. ಅಣ್ಣ-ತಮ್ಮಂದಿರಿಬ್ಬರೂ ಗೆಲುವಿಗಾಗಿ ನಿದ್ದೆ ಮಾಡುವುದಿಲ್ಲ. ಅವರ ತಾಯಿಯೂ ನಿದ್ದೆ ಮಾಡುವುದಿಲ್ಲ. ಆದ್ದರಿಂದ ನಮಗೆ ಯಾವ ಭಯವೂ ಇಲ್ಲ ಎಂದರು.