ಮಂಗಳೂರು: ಮೂಡಬಿದಿರೆಯ ಆಳ್ವಾಸ್ನಲ್ಲಿ ಮಂಗಳವಾರದಿಂದ ನಡೆಯುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಅಂತಾರಾಷ್ಟ್ರೀಯ ವಿಶ್ವ ಸಾಂಸ್ಕೃತಿಕ ಜಾಂಬೂರಿಯ ನೆನಪಿಗಾಗಿ ಬೃಹತ್ ಗಾಳಿಪಟವೊಂದನ್ನು ನಿರ್ಮಿಸಲಾಗುತ್ತಿದೆ. ಈ ಗಾಳಿ ಪಟವು ಒಟ್ಟು 50 ಅಡಿ ಎತ್ತರ ಮತ್ತು 16 ಅಡಿ ಅಗಲದವಿದ್ದು, ಭಾರತೀಯ ಸಾಂಪ್ರದಾಯಿಕ ಚಿತ್ರವನ್ನು ಇದು ಒಳಗೊಂಡಿದೆ.
ಈ ಬೃಹತ್ ಗಾಳಿ ಪಟವು ಟೀಂ ಮಂಗಳೂರು ಗಾಳಿಪಟ ತಂಡದ ಸದಸ್ಯರು ಮತ್ತು ಕಲಾವಿದರಾದ ದಿನೇಶ್ ಹೊಳ್ಳ ನವೀನ್ ಅಡ್ಕರ್, ಸತೀಶ್ ರಾವ್, ಭುವನ್ ಪಿ.ಜಿ., ಸಪ್ತಾ ನೊರೋನ್ಯ ಪ್ರಾಣೇಶ್ ಕುದ್ರೋಳಿ, ಅನುರಾಧಾ, ಸರ್ವೇಶ್ರಾವ್, ಅರುಣ್ ಕುಮಾರ್, ರವಿ ಅರಸಿನಮಕ್ಕಿ, ಶೇಖರ್ ಶಿಶಿಲ, ಅವಿನಾಶ್ ಭಿಡೆ ಅರಸಿನಮಕ್ಕಿ ಧಾರಿಣಿ ಮೊದಲಾದವರ ಶ್ರಮದಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಇವರೆಲ್ಲರು ಗಾಳಿಪಟವನ್ನು ಕಲ್ಯಾಣ ಮಂಟಪದಲ್ಲಿ ಕೊಡೆಯ ಬಟ್ಟೆಯಿಂದ ತಯಾರಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವು ಚಿತ್ರಗಳಿದ್ದು, ಅವುಗಳಿಗೆ ಬಣ್ಣ ಹಚ್ಚಲಾಗಿದೆ.
ಇನ್ನು ಈ ಗಾಳಿಪಟದಲ್ಲಿ ನಾಗಬನ, ಆಟಿಕಳಂಜ, ಗುತ್ತಿನ ಮನೆ, ತುಪ್ಪೆ, ಕೋಳಿ ಅಂಕ, ಯಕ್ಷಗಾನ, ಕಂಬಳ, ರಥೋತ್ಸವ ಚಿತ್ರಗಳನ್ನು ಬಿಡಿಸಲಾಗಿದೆ. ವಿಶೇಷವೆಂದರೆ ಈ ಗಾಳಿಪಟವನ್ನು ಹಾರಿಸಲಾಗುವುದಿಲ್ಲ. ಬದಲಾಗಿ ಆಳ್ವಾಸ್ ಸಂಸ್ಥೆಯಲ್ಲಿ ನಡೆಯಲಿರುವ ಜಾಂಬೂರಿಯ ನೆನಪಿಗಾಗಿ ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ.
ಹಾಗೆ ಪ್ರತಿ ದಿನಕ್ಕೆ 200ರಂತೆ 1 ಸಾವಿರ ಮಕ್ಕಳಿಗೆ ಗಾಳಿಪಟದ ಪ್ರಾತ್ಯಕ್ಷಿಕೆ ನಡೆಯಲಿದೆ. ಇನ್ನು ಮಕ್ಕಳು ತಯಾರಿಸಿದ ಗಾಳಿಪಟಗಳನ್ನು ಮಧ್ಯಾಹ್ನದ ಬಳಿಕ ಹಾರಿಸಲು ಅವಕಾಶವಿದೆ.
ಇದನ್ನೂ ಓದಿ: ಮೂಡಬಿದಿರೆಯಲ್ಲಿ ನಾಳೆಯಿಂದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ