ಮಂಗಳೂರು : ಕರಾವಳಿಯ ಪ್ರಸಿದ್ಧ 'ಆಭರಣ' ಚಿನ್ನದ ಮಳಿಗೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರಾವಳಿಯ ಅನೇಕ ಭಾಗಗಳಲ್ಲಿ ತನ್ನ ಶೋರೂಮ್ ಹೊಂದಿರುವ ಪ್ರಸಿದ್ಧ ಚಿನ್ನದ ಮಳಿಗೆ ಇದಾಗಿದ್ದು, ಹೊರ ಜಿಲ್ಲೆಗಳಲ್ಲೂ ಕೂಡ ಶಾಖೆಗಳನ್ನು ಹೊಂದಿದೆ.
ಇಂದು ಮಂಗಳೂರಿನ ಕದ್ರಿ, ಉಡುಪಿ, ಕಾರ್ಕಳ, ಕುಂದಾಪುರ, ಪುತ್ತೂರು, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ಆಭರಣದ ಅನೇಕ ಮಳಿಗೆಗಳಿಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ನ ಆಭರಣ ಜ್ಯುವೆಲ್ಲರಿಯಲ್ಲಿ ಐಟಿ ಅಧಿಕಾರಿಗಳು ಬೆಳಗ್ಗೆಯಿಂದ ತಪಾಸಣೆ ನಡೆಸುತ್ತಿದ್ದಾರೆ. ಐದಾರು ಜನರ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ಐಟಿ ತಂಡ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ. ಈ ಆಭರಣ ಸಂಸ್ಥೆ ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಮಳಿಗೆ ಹೊಂದಿದೆ.
ಆಭರಣ ಜ್ಯುವೆಲ್ಲರಿ ಮಳಿಗೆಯಲ್ಲಿ ಐಟಿ ಪರಿಶೀಲನೆ: ಆದಾಯ ತೆರಿಗೆ ಅಧಿಕಾರಿಗಳು ಆಭರಣ ಜ್ಯುವೆಲ್ಲರಿ ಶಾಪ್ ಮೇಲೆ ಇಂದು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಜೆಪಿಎನ್ ರಸ್ತೆಯ ಆಭರಣ ಮಳಿಗೆ ಸೇರಿದಂತೆ ತೀರ್ಥಹಳ್ಳಿ ಪಟ್ಟಣದ ಅಂಗಡಿ ಮೇಲೂ ಐಟಿ ದಾಳಿ ನಡೆದಿದೆ. ಕರ್ನಾಟಕದ ಆಭರಣ ಜ್ಯುವೆಲ್ಲರಿ ಶಾಪ್ ಎಲ್ಲಾ ಮಳಿಗೆಗಳ ಮೇಲೂ ದಾಳಿ ನಡೆಸಲಾಗಿದೆ.
ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಎಲ್ಲಾ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಶಿವಮೊಗ್ಗಕ್ಕೆ ಎರಡು ಕಾರುಗಳಲ್ಲಿ ಬಂದ ಸುಮಾರು 10 ಜನ ಅಧಿಕಾರಿಗಳು ಬಂದು ದಾಳಿ ನಡೆಸಿದ್ದಾರೆ.
ಅಂಗಡಿ ಬಂದ್ ಮಾಡಿಸಿ ಪರಿಶೀಲನೆ : ಆದಾಯ ತೆರಿಗೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯಿಂದ ಆಭರಣದ ಅಂಗಡಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು, ಐಟಿ ಅಧಿಕಾರಿಗಳು ಅಂಗಡಿಯನ್ನು ಬಂದ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರಿಂದ ಅಂಗಡಿ ಮುಂಭಾಗ ಲೆಕ್ಕ ಪರಿಶೋಧನೆ ನಡೆಯುತ್ತಿದೆ. ಹೀಗಾಗಿ ಇಂದು ವ್ಯವಹಾರ ಇರುವುದಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಅಧಿಕಾರಿಗಳು ಅಂಗಡಿ ಮುಖ್ಯಸ್ಥರು ಹಾಗೂ ಕೆಲಸಗಾರರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : 17 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ₹35 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ