ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ರೆಡ್ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷದ ಶಾಸಕರ ಸಂಬಂಧಿಕರು ಭಾಗಿಯಾಗಿದ್ದು, ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅಧ್ಯಕ್ಷತೆಯ ಸಮಿತಿಯಿಂದ ತನಿಖೆಯಾಗಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು, ಬಾಳೆಪುಣಿ, ಇನೋಳಿ ಭಾಗದಲ್ಲಿ ರೆಡ್ ಬಾಕ್ಸೈಟ್ ದಂಧೆ ನಡೆಸಲಾಗುತ್ತಿದೆ. ಕೇರಳದಲ್ಲಿ ಈ ರೆಡ್ ಬಾಕ್ಸೈಟ್ ತೆಗೆಯುವುದು ನಿಷೇಧವಾಗಿದೆ. ಆದರೆ ಮನೆ ಕಟ್ಟಲು ಕೆಂಪು ಕಲ್ಲು ತೆಗೆಯಲು ಪಡೆಯುವ ಸೀಮಿತ ದಿನದ ಪರ್ಮಿಷನ್ ಪಡೆದುಕೊಂಡು ಕಳೆದ 2 ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಬಳ್ಳಾರಿಯಲ್ಲಿ ಈ ಹಿಂದೆ ನಡೆದ ಅಕ್ರಮ ಗಣಿಗಾರಿಕೆ ನೆನಪಿಸುವಂತೆ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಆಡಳಿತ ಪಕ್ಷದ ಶಾಸಕರೊಬ್ಬರ ಸಂಬಂಧಿಕರು ಗಂಜಿಮಠದ ಬಡಗ ಎಡಪದವು ಗ್ರಾಮದಲ್ಲಿ ಪಡೆದುಕೊಂಡ ಲೈಸನ್ಸ್ ಇಟ್ಟುಕೊಂಡು ಮುಡಿಪುವಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಇದರಿಂದ 50 ಕೋಟಿ ನಷ್ಟವಾಗಿದೆ ಎಂದರು.
ಇಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿದ ಎಸಿಯವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಸಲಾಗಿದ್ದ ಮುಡಿಪು ಬಾಕ್ಸೈಟ್ ದಂಧೆಯ ವರದಿ ನೀಡುವ ತನಿಖಾ ಸಮಿತಿಯಲ್ಲಿ ನೇಮಿಸಲಾಗಿತ್ತು. ಅವರ ವರ್ಗಾವಣೆಗೆ ಬೇರೆ ಕಾರಣಗಳಿದ್ದರೂ ಈ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಸರ್ಕಾರ ಉಳಿಸಬಹುದಿತ್ತು. ಈ ಕಾರಣದಿಂದ ರೆಡ್ ಬಾಕ್ಸೈಟ್ ಗಣಿಗಾರಿಕೆ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅಧ್ಯಕ್ಷತೆಯ ಸಮಿತಿಯಿಂದ ತನಿಖೆಯಾಗಲಿ ಎಂದು ಹೇಳಿದರು. ಸರ್ಕಾರ ತನಿಖೆಗೆ ಮುಂದಾಗದಿದ್ದರೆ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಕಾಂಗ್ರೆಸ್ ನಿಲ್ಲಿಸಿದ ರೀತಿಯಲ್ಲಿ ಇಲ್ಲಿಯೂ ನಿಲ್ಲಿಸಲು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.