ಮಂಗಳೂರು: ಸದ್ಯ ಬೆಳಗಾವಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ಅವರಿಗೆ ಚಪ್ಪಲಿ ಹಾರ ಎಸೆದಿಲ್ಲ, ಚಪ್ಪಲಿಯನ್ನು ಡಿಕೆಶಿ ಅವರು ಇದ್ದ ಕೊನೆಯ ಭಾಗಕ್ಕೆ ಎಸೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಹಾಗಾಗಿ ಯಾವುದೇ ಸಣ್ಣ ಕೆಟ್ಟ ಘಟನೆ ಕೂಡಾ ನಡೆಯಕೂಡದು. ಸಂಪೂರ್ಣ ಭದ್ರತೆಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಬೇಕು. ಅಲ್ಲದೇ ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕೇರಳ ಚುನಾವಣೆ ನಿಮಿತ್ತ ಮಂಜೇಶ್ವರಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಲಿರುವ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿd ಅವರು, ಸಿಡಿ ಪ್ರಕರಣದಲ್ಲಿ ಕಾಂಗ್ರೆಸಿಗರು ಏನು ಹೇಳುತ್ತಾರೆ, ಅಥವಾ ಇನ್ಯಾರೋ ಏನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಈ ವಿಚಾರದಲ್ಲಿ ಕಾನೂನು ಹಾಗೂ ಕ್ರಮಬದ್ಧವಾಗಿ ತನಿಖೆ ನಡೆಯಬೇಕಿದ್ದು, ಅದನ್ನು ನಾವು ಖಂಡಿತಾ ಮಾಡುತ್ತೇವೆ. ಈ ಬಗ್ಗೆ ಯಾರು ಏನು ಹೇಳಿಕೆ ನೀಡಿದರೂ ನಮಗೆ ಸಂಬಂಧಪಟ್ಟಿಲ್ಲ ಎಂದರು.
ಮೇಟಿ ಪ್ರಕರಣದಲ್ಲಿ ಕಾಂಗ್ರೆಸಿಗರು ಕೇಸ್ ದಾಖಲಿಸಿದ್ದರೇ?
ಈ ಹಿಂದೆ ಮೇಟಿ ಪ್ರಕರಣದಲ್ಲಿ ಸ್ವತಃ ಕಾಂಗ್ರೆಸಿಗರೇ ಕೇಸ್ ದಾಖಲಿಸಿಕೊಂಡಿರಲಿಲ್ಲ. ಹಾಗಾಗಿ ಕಾಂಗ್ರೆಸ್ನವರ ಹೇಳಿಕೆಗೆ ನಾವು ಮಹತ್ವ ಕೊಡುವುದಿಲ್ಲ. ನಮ್ಮ ಎಸ್ಐಟಿಯಲ್ಲಿ ದಕ್ಷ ಅಧಿಕಾರಿಗಳಿದ್ದು, ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಯಾರ ಒತ್ತಡ, ಪ್ರಭಾವಗಳಿಗೆ ಮಣಿದು ಅವರು ಕೆಲಸ ಮಾಡುತ್ತಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ವಿಡಿಯೋಗಳು, ಸಿಡಿಗಳು ಬಂದಿವೆ. ಇವೆಲ್ಲವನ್ನೂ ವೈಜ್ಞಾನಿಕ ತನಿಖೆಗೆ ಒಳಪಡಿಸಿದ್ದೇವೆ. ತನಿಖೆಯ ಹಂತದಲ್ಲಿರುವಾಗ ಯಾವುದೇ ವಿಚಾರಗಳನ್ನು ಮಾತನಾಡುವುದು ಸರಿಯಲ್ಲ. ಆದರೆ ಒಟ್ಟಾರೆ ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.