ಮಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಸಿಡಿ ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಉಪಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಯ ಹೇಳಿಕೆಯೇ ಪ್ರಾಮುಖ್ಯತೆ ಹೊಂದುತ್ತದೆ ಹೊರತು, ಯುವತಿಯ ಕುಟುಂಬಸ್ಥರ ಹೇಳಿಕೆಯಲ್ಲ. ಸಂತ್ರಸ್ತೆಯ ಕುಟುಂಬದವರು ನಡೆಸಿರುವ ಮಾಧ್ಯಮಗೋಷ್ಟಿ ಎಸ್ಐಟಿ ಪ್ರಾಯೋಜಿತವಾದದ್ದು. ಜಾರಕಿಹೊಳಿಯವರು ಸಾಕ್ಷ್ಯನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಉದ್ಯೋಗದ ಆಮಿಷ ತೋರಿಸಿ ಯುವತಿಯೋರ್ವಳನ್ನು ಲೈಂಗಿಕವಾಗಿ ಬಳಸಿರುವ ಸಿಡಿ ಪ್ರಕರಣದ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕೆಂದು ಒತ್ತಾಯಿಸಿ, ನಾಳೆಯಿಂದ ಬೆಂಗಳೂರಿನ ಎಸ್ಐಟಿ ಕಚೇರಿ ಮುಂಭಾಗ ಧರಣಿ ಕುಳಿತುಕೊಳ್ಳುತ್ತೇವೆಂದು ಮಿಥುನ್ ರೈಯವರು ಹೇಳಿದರು.
ಓದಿ:ಬೆಳಗಾವಿಯಲ್ಲಿ ಡಿಕೆಶಿಗೆ ಪ್ರತಿಭಟನೆಯ ಸ್ವಾಗತ: ಬೆಂಗಾವಲು ಕಾರಿನ ಮೇಲೆ ದಾಳಿ, ಚಪ್ಪಲಿ ಎಸೆತ
ಸಂತ್ರಸ್ತೆ ಯುವತಿಯ ಕುಟುಂಬದವರಿಗೆ ಬೆದರಿಕೆ ಇದ್ದು, ಬೆದರಿಕೆಯ ಮೂಲಕವೇ ಆಕೆಯ ಕುಟುಂಬದವರನ್ನು ಎಸ್ಐಟಿಗೆ ಕಳುಹಿಸಲಾಗಿದೆ. ಎಸ್ಐಟಿ ಅಧಿಕಾರಿಗಳು ಹೇಳಿಕೊಟ್ಟಂತೆ ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ. ಒಂದು ವೇಳೆ ಕುಟುಂಬಸ್ಥರು ಬೆದರಿಕೆಗೆ ಒಳಗಾಗಿಲ್ಲದಿದ್ದರೆ ಅವರು 25 ದಿನಗಳ ಬಳಿಕ ಎಸ್ಐಟಿ ಬಳಿ ಹೋಗಿದ್ದು ಯಾಕೆ ಎಂದು ಮಿಥುನ್ ರೈ ಪ್ರಶ್ನಿಸಿದರು.