ಬಂಟ್ವಾಳ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತು ಬಿಜೆಪಿ ಮುಖಂಡರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಬಂಟ್ವಾಳ ಬ್ಲಾಕ್ ಖಂಡಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು, ಎರಡು ವರ್ಷದಿಂದ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಕ್ಷೇತ್ರದ ಶಾಸಕರು ಮೌನ ತಾಳಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮರಳಿನ ದರ ಏರಿಕೆಯಾಗಿ ಬಡವರಿಗೆ ಮನೆ ಕಟ್ಟಲು ಕಷ್ಟವಾಗಿದೆ. ಆದರೆ, ಬಿಜೆಪಿ ಮುಖಂಡರು ಇದೀಗ ಮಾಜಿ ಸಚಿವ ಬಿ.ರಮಾನಾಥ ರೈ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರೈ ಅವರ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಬಗ್ಗೆ ಕ್ಷೇತ್ರದ ಜನತೆಗೆ ಗೊತ್ತಿದೆ. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ನಾಯಕರಿಗೆ ಇನ್ನೊಬ್ಬರ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಬೇಬಿ ಕುಂದರ್ ಹೇಳಿದ್ದಾರೆ.
ಜನತೆಯ ಕಷ್ಟಕ್ಕೆ ಯಾವುದೇ ಜಾತಿ - ಧರ್ಮ ಭೇದವಿಲ್ಲದೇ ಪ್ರಾಮಾಣಿಕವಾಗಿ ಸ್ಪಂದಿಸುವುದೇ ನಿಜವಾದ ರಾಜಧರ್ಮ. ಅಂತಹ ಮಾನವೀಯ ಧರ್ಮವನ್ನು ರಮಾನಾಥ ರೈ ತನ್ನ ಅಧಿಕಾರಾವಧಿಯಲ್ಲಿ ಪಾಲಿಸಿದ್ದಾರೆ. ಈಗಲೂ ಪಾಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಶಾಸಕರು ತನ್ನ ಜವಾಬ್ದಾರಿಯನ್ನು ಅರಿತು ಕ್ರಮ ಕೈಗೊಳ್ಳದಿರುವುದು ಸಂಶಯ ಸೃಷ್ಟಿಸಿದೆ ಎಂದು ಅನುಮಾನ ವ್ಯಕ್ತಪಡಿಸಿದರು.