ಸುಳ್ಯ(ದಕ್ಷಿಣ ಕನ್ನಡ): ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಅಕ್ರಮಗಳ ವಿರುದ್ಧ ಸಮರ ಸಾರಿರುವ ಇಲ್ಲಿನ ಕಿರಿಯ ಅಧಿಕಾರಿಗಳು, ಭಾನುವಾರ ಅಜ್ಜಾವರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರು ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಪಂಚಾಯತ್ ವ್ಯಾಪ್ತಿಯ ನಾಗೇಶ್ ಎಂಬುವವರ ಜಮೀನಿನಲ್ಲಿ ಸಮಾರು 80 ಲೋಡ್‌ನ ಎರಡು ಅಕ್ರಮ ಮರಳು ದಾಸ್ತಾನು ಮತ್ತು ಅಡ್ಪಂಗಾಯ ಎಂಬಲ್ಲಿ ಮಹಮ್ಮದ್ ಶರೀಫ್ ಎಂಬುವರ ಜಮೀನಿನಲ್ಲಿ ಸುಮಾರು 10 ಲೋಡ್, ಪೊರಂಬೋಕಿನಲ್ಲಿ 5 ರಿಂದ 10 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದೆ.
ಸ್ಥಳ ತನಿಖೆ ವೇಳೆ ಸುನಿಲ್ ಹಾಗೂ ಶರೀಫ್ ಎಂಬುವರು ಇದು ತಮಗೆ ಸಂಬಂಧಿಸಿದ ಮರಳು ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಆದರೆ ಅಜ್ಜಾವರ ಗ್ರಾಮಕ್ಕೆ ಸಂಬಂಧವೇ ಇಲ್ಲದ ಮತ್ತು ದಾಸ್ತಾನಿಗೆ ಸಂಬಂಧವಿರದ ದಾಖಲೆಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯದ ನಾನಾ ಕಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು, ಮರಳುಗಾರಿಕೆ ಸೇರಿದಂತೆ ಅಕ್ರಮಗಳಿಗೆ ಗಣಿ ಇಲಾಖೆಯ ಸೇರಿದಂತೆ ಇಲ್ಲಿನ ಹಿರಿಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಕಿರಿಯ ಅಧಿಕಾರಿಗಳು ತಮ್ಮ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಭಯ ಪಡಿಸುವ ಕೆಲಸಗಳು ಕೂಡ ಹಿರಿಯ ಅಧಿಕಾರಿಗಳಿಂದ ನಡೆಯುತ್ತಿರುವುದಾಗಿ ಅಧಿಕಾರಿಯೋರ್ವರು ಹೇಳಿದ್ದಾರೆ.
ಒಟ್ಟಿನಲ್ಲಿ ಇದೀಗ ಇಲ್ಲಿನ ಕಿರಿಯ ಅಧಿಕಾರಿಗಳ ಕೆಲಸಗಳು ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ವಿರದ್ಧ ಅಥವಾ ಅಕ್ರಮದ ವಿರುದ್ಧ ಯಾವ ರೀತಿಯಲ್ಲಿ ಕ್ರಮ ಜರುಗಿಸುವರು ಎಂಬುದನ್ನು ಕಾದು ನೋಡಬೇಕಿದೆ. ದಾಳಿಯಲ್ಲಿ ಅಜ್ಜಾವರ ಗ್ರಾಮ ಆಡಳಿತ ಅಧಿಕಾರಿ ಶರತ್, ಸುಳ್ಯ ಮೆಸ್ಕಾಂ ಇಂಜಿನಿಯರ್ ಸುಪ್ರಿತ್, ಗ್ರಾಮ ಸಹಾಯಕ ಶಿವಣ್ಣ ಸೇರಿದಂತೆ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಾಲಕಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ: ಮೂವರು ಅರೆಸ್ಟ್